
'ಬುರ್ಜ್ ಖಲೀಫಾ' ದ ಲೇಸರ್ ಪ್ರದರ್ಶನದಿಂದ ವಿಮಾನ ಹಾರಾಟಕ್ಕೆ ತೊಂದರೆ: ದೂರಿನ ಬಳಿಕ ಪ್ರದರ್ಶನ ರದ್ದು
Wednesday, October 13, 2021
ಕೋಲ್ಕತಾ: ಈ ಬಾರಿಯಾ ದುರ್ಗಾ ಪೂಜೆಗೆ ಕೊಲ್ಕತ್ತಾದ ಶ್ರೀಭೂಮಿ ದುರ್ಗಾಪೂಜಾ ಪೆಂಡಾಲ್‌ನ ಲ್ಲಿ ದುಬೈ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದ ಮಾಡೆಲ್ ತಯಾರಿಸಿದ್ದು, ಆಕರ್ಷಣೆ ಯ ನಿಟ್ಟಿನಲ್ಲಿ ಈ ಪ್ರತಿರೂಪದಿಂದ ಲೇಸರ್ ಪ್ರದರ್ಶನ ಕೂಡಾ ಇತ್ತು.
ಆದರೆ ಈ ಲೇಸರ್ ಪ್ರದರ್ಶನದಿಂದ ಲ್ಯಾಂಡಿಂಗ್ ವೇಳೆ ತೀವ್ರ ತೊಂದರೆ ಉಂಟಾಗುತ್ತದೆ ಎಂದು ಪೈಲಟ್ ಗಳು ವಾಯು ಸಂಚಾರ ನಿಯಂತ್ರಣ ಟವರ್‌ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೇಸರ್ ಶೋ ರದ್ದುಪಡಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು 'ಎಟಿಸಿಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರು ಘಟನಾ ಸ್ಥಳಕ್ಕೆ ತೆರಳಿ ಪ್ರದರ್ಶನ ರದ್ದುಪಡಿಸಿದ್ದಾರೆ ಎಂದರು.
ಪ್ರದರ್ಶನದ ತೀವ್ರ ಲೇಸರ್ ಕಿರಣಗಳು ವಿಮಾನಗಳಿಗೆ ಲ್ಯಾಂಡಿಂಗ್ ವೇಳೆ ಗೊಂದಲ ಸೃಷ್ಟಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಪೆಂಡಾಲನ್ನು ಅಕ್ಟೋಬರ್ 9ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ಘಾಟಿಸಿದ್ದರು.