ಕೊರೋನಾ ನಿಯಂತ್ರಣಕ್ಕಾಗಿ ಗಡಿಯಲ್ಲಿ ನಿರ್ಬಂಧ ವಿಚಾರ: ಕರ್ನಾಟಕ ಸರಕಾರದ ವಿರುದ್ಧ ಮಂಜೇಶ್ವರ ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ಏನಾಯಿತು ಗೊತ್ತೇ?
Saturday, October 30, 2021
ನವದೆಹಲಿ: ಕೊರೋನಾ ಸೋಂಕು ವ್ಯಾಪಿಸುವುದನ್ನು ತಡೆಯಲು, ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಜನರಿಗೆ ಗಡಿಯಲ್ಲಿ ಕರ್ನಾಟಕ ಸರಕಾರ ಹೇರಲಾಗಿರುವ ನಿರ್ಬಂಧ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಈ ವಿಚಾರವಾಗಿ ಮಂಜೇಶ್ವರ ಶಾಸಕರಾದ ಎಕೆಎಂ ಅಶ್ರಫ್ ಅವರು ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ ಕಂಡಾಗ, ತಲಪಾಡಿ ಸಹಿತ ಕಾಸರಗೋಡಿನ ವಿವಿಧ ಗಡಿಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವುವ ಕೇರಳದ ಜನತೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೆಲವು ನಿರ್ಬಂಧ ವಿಧಿಸಿತ್ತು.
ಈ ನಿರ್ಬಂಧಗಳ ಪೈಕಿ ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡವರೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂಬ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಈ ಕುರಿತಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. 'ದೇಶದಲ್ಲಿ ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಅಂತ್ಯವಾಗಿಲ್ಲ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ಗಡಿಯಲ್ಲಿ ನಿರ್ಬಂಧದ ಕ್ರಮಗಳನ್ನು ಕೈಗೊಂಡಿದ್ದು, ಸರಿ. ಇಲ್ಲದಿದ್ದರೆ ಕೇರಳದಿಂದ ಕರ್ನಾಟಕಕ್ಕೆ ಬರುವವರ ಮೇಲೆ ನಿರ್ಬಂಧ ವಿಧಿಸುತ್ತಿರಲಿಲ್ಲ. ಹೀಗಾಗಿ ಈ ವಿಷಯದಲ್ಲಿ ಮಂಗಳೂರಿಗೆ ತೆರಳಬಯಸುವ ಕಾಸರಗೋಡು ಜನರ ಮೂಲಭೂತ ಹಕ್ಕು ಉಲ್ಲಂಘನೆಯಾಗಿಲ್ಲ' ಎಂದು ಹೇಳಿತು ಹಾಗೂ ಅರ್ಜಿಯನ್ನು ತಿರಸ್ಕರಿಸಿತು.
ವಿದ್ಯಾರ್ಥಿಗಳು, ಉದ್ಯಮಿಗಳು, ಮಂಗಳೂರಿನಲ್ಲಿ ಕೆಲಸ ನಿರ್ವಹಿಸುವವರ ಹಿತದೃಷ್ಟಿಯಿಂದ ಕರ್ನಾಟಕ ಸರಕಾರ ಕೆಲ ಸಡಿಲಿಕೆಯ ಕ್ರಮ ಕೈಗೊಂಡಿದೆ. ಹೀಗಾಗಿ ಈ ಹಂತದಲ್ಲಿ ಈ ಅರ್ಜಿಯು ಸಮಂಜಸ ಎನ್ನಿಸುವುದಿಲ್ಲ' ಎಂದು ನ್ಯಾಯಪೀಠ ನುಡಿಯಿತು.
ಈ ವಿಚಾರವಾಗಿ ಮಂಜೇಶ್ವರ ಶಾಸಕರು ಈ ಹಿಂದೆ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಇದೇ ಮಾದರಿಯ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಸೆ.28ರಂದು ಮೇಲ್ಮನವಿ ಸಲ್ಲಿಸಿದ್ದರು. 'ಕೇರಳದ ಕಾಸರಗೋಡಿನ ಜನ ಹಲವು ವಿಚಾರಗಳಿಗೆ ಮಂಗಳೂರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಹೀಗಾಗಿ ಕರ್ನಾಟಕದ ನಿರ್ಬಂಧವು ಕಾಸರಗೋಡು ಜನರಿಗೆ ತೊಂದರೆ ಉಂಟು ಮಾಡಿದೆ. ಇದು ಗಡಿ ನಿರ್ಬಂಧಿಸಬಾರದು ಎಂಬ ಕೇಂದ್ರ ಸರಕಾರದ ನಿಯಮಗಳಿಗೆ ವಿರುದ್ಧವಾಗಿದೆ' ಎಂದು ಮೇಲ್ಮನವಿಯಲ್ಲಿ ಶಾಸಕರು ವಾದಿಸಿದ್ದರು.