ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದೇ ತಪ್ಪಾಯಿತಾ?: 24ರ ಹರೆಯದ ಯುವತಿಗಾಗಿ ನಡೆಯಿತು ಆ ದುರಂತ ಘಟನೆ
Sunday, October 24, 2021
ವಿಜಯಪುರ: ಮುಸ್ಲಿಂ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕಾಗಿ 34 ವರ್ಷದ ಹಿಂದೂ ಯುವಕನನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರದ ಬಳಗನೂರಿನಲ್ಲಿ ನಡೆದಿದೆ.
ಅಕ್ಟೋಬರ್ 21ರಂದು ಬಳಗನೂರಿನ ರವಿ ನಿಂಬರಗಿ ದಿನಸಿ ತರಲು ಮನೆಯಿಂದ ಹೊರ ಹೋಗಿದ್ದ. ಬಳಿಕ ಆತ ನಾಪತ್ತೆಯಾಗಿದ್ದು, ಆಕೆಯ 24 ವರ್ಷದ ಪ್ರೇಯಸಿ ಅಮ್ರಿನ್ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ನಾಪತ್ತೆಯಾಗಿದ್ದ ಬಗ್ಗೆ ದೂರು ನೀಡಿದ್ದಳು.
ನಾಪತ್ತೆಯಾಗಿದ್ದ ರವಿ ನಿಂಬರಗಿ ಶವ ಅಕ್ಟೋಬರ್ 23ರಂದು ಇಲ್ಲಿನ ಹೊಲದ ಬಾವಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ರವಿ ನಿಂಬರಗಿ ತನ್ನದೇ ಗ್ರಾಮದ ಅಮ್ರಿನ್ ಎಂಬ ಯುವತಿಯನ್ನು ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಯುವತಿ ಕುಟುಂಬಸ್ಥರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಯುವಕನಿಗೆ ಎಚ್ಚರಿಕೆಯನ್ನು ನೀಡಿದ್ದರು ಎನ್ನಲಾಗಿದೆ.
ಯುವತಿಯ ದೂರಿನನ್ವಯ ಪ್ರಕರಣ ದಾಖಲಿಸಿರುವ ಪೊಲೀಸರು, ಯುವತಿಯ ಮಾವ ಮತ್ತು ಸಹೋದರನನ್ನು ಬಂಧಿಸಿದ್ದಾರೆ.
ಆರೋಪಿಗಳು ವಿಚಾರಣೆ ವೇಳೆ ರವಿ ನಿಂಬರಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಅಮ್ರಿನ್ ಮನೆಗೆ ಹೋಗದೆ ಸಾಂತ್ವನ ಕೇಂದ್ರ ಸೇರಿಕೊಂಡಿದ್ದಾಳೆ.