
ಕಾಂಗ್ರೆಸ್ ಶಾಸಕನ ಕಣ್ಣು ನೋಟಿನ 'ಗಾಂಧಿ' ಮೇಲೆ: 2000, 500 ರೂ ನೋಟಿನಿಂದ 'ಮಹಾತ್ಮ ಗಾಂಧಿ'ಯನ್ನು ತೆಗೆಯಲು ಮೋದಿಗೆ ಆಗ್ರಹ
Friday, October 8, 2021
ನವದೆಹಲಿ: 2000 ಮತ್ತು 500 ರೂ ನೋಟನ್ನು ಹೆಚ್ಚಾಗಿ ಲಂಚ ಮತ್ತು ಭ್ರಷ್ಟಾಚಾರಕ್ಕೆ ಕೆಲವರು ಬಳಸುತ್ತಿದ್ದು, ಇದರಿಂದ ಗಾಂಧೀಜಿಯ ಆಶಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಈ ಎರಡೂ ನೋಟಿನಲ್ಲಿರುವ ಗಾಂಧೀಜಿಯ ಚಿತ್ರವನ್ನು ತೆಗೆದು ಬೇರೆ ಚಿತ್ರ ಹಾಕಬೇಕೆಂದು ಕಾಂಗ್ರೆಸ್ ಶಾಸಕರೋರ್ವರು ಪ್ರಧಾನಿ ನರೇಂದ್ರ ಮೋದಿಯನ್ನು ಆಗ್ರಹಿಸಿದ್ದಾರೆ.
ಮಾಜಿ ಸಚಿವ ಹಾಗೂ ಸಂಗೋಡಿನ ಶಾಸಕರಾಗಿರುವ ಭರತ್ ಸಿಂಗ್ ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಮಹಾತ್ಮ ಗಾಂಧಿ ಸತ್ಯದ ಸಂಕೇತ. ಆದರೆ ಅವರ ಭಾವಚಿತ್ರ ಇರುವ ನೋಟನ್ನು ಭ್ರಷ್ಟಾಚಾರ ಕ್ಕೆ ಬಳಸುವುದು ಅವರಿಗೆ ಮಾಡುವ ಅವಮಾನ ಎಂದಿದ್ದಾರೆ.
ಈ ಎರಡೂ ನೋಟುಗಳಲ್ಲಿ ಗಾಂಧೀಜಿ ಭಾವ ಚಿತ್ರದ ಬದಲಿಗೆ ಅವರ ಕನ್ನಡಕ ಇಲ್ಲವೇ ಅಶೋಕ ಚಕ್ರದ ಫೋಟೋ ಬಳಸಬೇಕೆಂದು ಅವರು ಮೋದಿಗೆ ಆಗ್ರಹಿಸಿದ್ದಾರೆ.
ದೇಶಾದ್ಯಂತ ಭ್ರಷ್ಟಾಚಾರ ಹೆಚ್ಚಾಗಿದ್ದು, ಭ್ರಷ್ಟಾಚಾರಕ್ಕೆ 2000 ಮತ್ತು 500 ರೂ ನೋಟುಗಳನ್ನು ಬಳಸಲಾಗುತ್ತಿದೆ. ಅಲ್ಲದೆ ಬಾರ್, ಕ್ಯಾಬರೇ ನೃತ್ಯಗಾರರ ಮೇಲೂ ನೋಟುಗಳನ್ನು ಎಸೆಯಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಿಪಡಿಸಿದರು.
ಈ ಎರಡೂ ನೋಟುಗಳನ್ನು ಹೊರತು ಪಡಿಸಿ ಉಳಿದ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಫೋಟೋ ಇರುವುದಕ್ಕೆ ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.