
ಪತಿಯನ್ನು ತೊರೆದು ಮಕ್ಕಳನ್ನು ಕರೆದುಕೊಂಡು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಹಿಳೆ ಪೊಲೀಸ್ ಠಾಣೆಗೆ ಹಾಜರು
Tuesday, September 7, 2021
ಮಂಗಳೂರು: ಪತಿಯನ್ನು ತೊರೆದು ತನ್ನಿಬ್ಬರು ಮಕ್ಕಳೊಂದಿಗೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಹಿಳೆ ನಿನ್ನೆ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಬಂದು ಹಾಜರಾಗಿದ್ದಾರೆ. ಆಕೆ ಪತಿಯೊಂದಿಗೆ ತೆರಳಲು ನಿರಾಕರಿಸಿರುವುದಾಗಿ ತಿಳಿದುಬಂದಿದೆ.
ಜಯನಗರ ಕೊಯಿಂಗೋಡಿ ಸಮೀಪದ ನಿವಾಸಿ ಮನೋಜ್ ಎಂಬವರ ಪತ್ನಿ ಸಂಧ್ಯಾ ಪರಾರಿಯಾಗಿದ್ದ ಮಹಿಳೆ
ಸಂಧ್ಯಾ ತನ್ನಿಬ್ಬರು ಮಕ್ಕಳೊಂದಿಗೆ ಸಂಬಂಧಿಕನೇ ಆದ ಪ್ರದೀಪ್ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾರೆ ಎಂದು ಆಕೆಯ ಪತಿ ಮನೋಜ್ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಸುಳ್ಯ ಠಾಣಾ ಉಪನಿರೀಕ್ಷಕ ಎಂ.ಆರ್.ಹರೀಶ್ ಅವರು, ಪ್ರದೀಪ್ ಹಾಗೂ ಮಹಿಳೆಯನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ನಿನ್ನೆ ಸಂಜೆ 5.30 ಸುಮಾರಿಗೆ ಕೇವಲ ಸಂಧ್ಯಾ ಮಾತ್ರ ಠಾಣೆಗೆ ಹಾಜರಾಗಿದ್ದರು. ಆಕೆ ಪೊಲೀಸರಲ್ಲಿ 'ತಾನು ಮುಂದೆ ಪ್ರದೀಪನೊಂದಿಗೆ ಬಾಳುವ ನಿರ್ಧಾರ ಹೊಂದಿದ್ದು, ಅವರೊಂದಿಗೆ ಇರುತ್ತೇನೆಂದು' ಹೇಳಿಕೆ ನೀಡಿದ್ದಾರೆ.
ಪತ್ನಿ ಹಾಗೂ ಆಕೆಯ ಪ್ರಿಯಕರ ಬರುವ ವಿಷಯ ತಿಳಿದು ಪತಿ ಮನೋಜ್ ಹಾಗೂ ಅವರ ಸಂಬಂಧಿಕರು ಪೊಲೀಸ್ ಠಾಣೆಗೆ ಮಾತುಕತೆಗೆಂದು ಆಗಮಿಸಿದ್ದರು. ಆದರೆ ಸಂಧ್ಯಾ 'ತನಗೆ ಪತಿ ಹೊಡೆಯುತ್ತಿದ್ದು, ಅವರೊಂದಿಗೆ ನಾನು ಬಾಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕುವುದಾಗಿ ತಿಳಿಸಿ, ಅಲ್ಲಿಂದ ತೆರಳಿದ್ದಾರೆ' ಎನ್ನಲಾಗಿದೆ.
ಇದೇ ಸಮಯದಲ್ಲಿ ಸಂಧ್ಯಾ ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿಲ್ಲವೆಂದು ಗುಂಪಿನ ಸದಸ್ಯೆಯರು ಠಾಣೆಗೆ ಬಂದು ಸಂಧ್ಯಾರವರನ್ನು ಕಾಯುತ್ತಿದ್ದರು. ವಿಚಾರಣೆ ಮುಗಿಸಿ ಹೊರಬಂದ ಸಂಧ್ಯಾರಲ್ಲಿ ಸಂಘದಿಂದ ಸಾಲ ಪಡೆದ ಹಣ ನೀಡುವ ಕುರಿತು ಮಾತಿನ ಚಕಮಕಿ ನಡೆಸಿದ್ದಾರೆ. ಅದಕ್ಕೆ ಅವರು ಕಚೇರಿಗೆ ಹೋಗಿ ಇದನ್ನು ಸರಿ ಪಡಿಸುತ್ತೇನೆಂದು ಹೇಳಿದರೆನ್ನಲಾಗಿದೆ. ಈ ಎಲ್ಲಾ ಘಟನೆಯ ಬಳಿಕ ಠಾಣೆಗೆ ಬಂದಿದ್ದ ಮಹಿಳೆಯ ಗಂಡ ಮತ್ತು ಮನೆಯವರು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆಂದು ತಿಳಿಸಿದ್ದಾರೆ.