IMPORTANT: ಇನ್ನು ಮುಂದೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ದರ್ಶನಕ್ಕೆ ಈ ದಾಖಲೆಗಳು ಕಡ್ಡಾಯ..!
Saturday, September 4, 2021
ಉಡುಪಿ: ಬೈಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ತಾನಕ್ಕೆ ನೂತನ ನಿಯಮ ಜಾರಿಯಾಗಿದೆ. ಜಿಲ್ಲಾಧಿಕಾರಿ ಆದೇಶ ಹಿನ್ನೆಲೆ, ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರು ಇನ್ನು ಮುಂದೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆ, ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಸೆಪ್ಟಂಬರ್ 4 ರಿಂದ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ.
ದೇವಾಲಯ ಪ್ರವೇಶದ್ವಾರದಲ್ಲಿ ಎಲ್ಲಾ ಭಕ್ತಾದಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಹೆಸರು, ಊರು ಹಾಗೂ ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಕೇರಳ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತರು ದೇವಸ್ಥಾನ ಪ್ರವೇಶಿಸುವ 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್- 19 ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅಲ್ಲದೆ ಮೂಕಾಂಬಿಕಾ ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.