ಆರ್ಡರ್ ನೀಡಲು ತಡಮಾಡಿದನೆಂದು ರೆಸ್ಟೋರೆಂಟ್ ಮಾಲಕನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ಡೆಲಿವರಿ ಬಾಯ್
Thursday, September 2, 2021
ಗ್ರೇಟರ್ ನೋಯ್ಡಾ: ಆರ್ಡರ್ ನೀಡುವುದು ತಡವಾಗಿರುವುದಕ್ಕೆ ವಿಚಾರಕ್ಕೆ ಗದ್ದಲ ಮಾಡಿದ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿಯ ಡೆಲಿವರಿ ಬಾಯ್ ಓರ್ವ ರೆಸ್ಟೋರೆಂಟ್ ಮಾಲಕನನ್ನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬುಧವಾರ 12:15ರ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಜಮ್ ಜಮ್ ರೆಸ್ಟೋರೆಂಟ್ ಮಾಲಕ ಸುನೀಲ್ ಅಗರ್ವಾಲ್ ಕೊಲೆಯಾದ ವ್ಯಕ್ತಿ.
ಸ್ವಿಗ್ಗಿ ಡೆಲಿವರಿ ಬಾಯ್ ಜಮ್ ಜಮ್ ರೆಸ್ಟೋರೆಂಟ್ ಗೆ ಆಗಮಿಸಿ ಚಿಕನ್ ಬಿರಿಯಾನಿ ಹಾಗೂ ಪೂರಿ ಸಬ್ಜಿಯ ಆರ್ಡರ್ ಮಾಡಿದ್ದಾನೆ. ಸಮಯಕ್ಕೆ ಸರಿಯಾಗಿ ಬಿರಿಯಾನಿ ಸಿದ್ಧವಾಗಿತ್ತು. ಆದರೆ ಪೂರಿ ಸಬ್ಜಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಂದು ರೆಸ್ಟೋರೆಂಟ್ ಕೆಲಸಗಾರ ಹೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರೆಸ್ಟೋರೆಂಟ್ ಮಾಲಕ ಸುನೀಲ್ ಅಗರ್ವಾಲ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಪ್ರಯತ್ನಿಸಿದ್ದಾರೆ.
ಆಗ ಡೆಲಿವರಿ ಬಾಯ್ ತನ್ನ ಸ್ನೇಹಿತನ ಸಹಾಯದಿಂದ ರೆಸ್ಟೋರೆಂಟ್ ಮಾಲಕನ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ತಕ್ಷಣವೇ ರೆಸ್ಟೋರೆಂಟ್ ಮಾಲಕನನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದನು. ಪೊಲೀಸರು ನಡೆಸಿದ ತನಿಖೆ ವೇಳೆ ಆರೋಪಿ ಮದ್ಯ ಸೇವಿಸಿದ್ದನು ಎಂಬ ಮಾಹಿತಿ ತಿಳಿದು ಬಂದಿದೆ.