ಕೆಟ್ಟು ನಿಂತ ರೈಲನ್ನೇ ತಳ್ಳಿದ ಜನರು: ವೀಡಿಯೋ ವೈರಲ್
Thursday, September 2, 2021
ಹರ್ಡಾ (ಮಧ್ಯಪ್ರದೇಶ): ಮಾರ್ಗ ಮಧ್ಯೆ ಕೆಟ್ಟು ನಿಂತ ಬಸ್ಸು, ಕಾರು ಇನ್ನಿತರೆ ವಾಹನಗಳನ್ನು ಜನರೇ ತಳ್ಳಿಕೊಂಡು ಹೋಗುವ ದೃಶ್ಯವನ್ನು ಸರ್ವೇಸಾಮಾನ್ಯ ನಾವು ನೋಡುತ್ತಿರುತ್ತೇವೆ. ಆದರೆ ಮಧ್ಯಪ್ರದೇಶದ ಹರ್ಡಾ ಎಂಬಲ್ಲಿನ ರೈಲ್ವೆ ನಿಲ್ದಾಣದಲ್ಲಿ ಟವರ್ ವ್ಯಾಗನ್‌ನಲ್ಲಿ (ಇಲೆಕ್ಟ್ರಿಕ್ ಲೋಕೋಮೋಟಿವ್‌ಗಳಿಗೆ ಶಕ್ತಿ ತುಂಬುವ ಕೇಬಲ್‌ಗಳನ್ನು ಪರೀಕ್ಷಿಸಲು ಬಳಸುವ ಸ್ವಯಂ-ಚಾಲಿತ ಘಟಕ) ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಜನರೇ ರೈಲನ್ನು ತಳ್ಳಿಕೊಂಡು ಹೋಗಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಹರ್ಡಾ ರೈಲ್ವೆ ನಿಲ್ದಾಣದ ಟ್ರ್ಯಾಕ್ ಬಳಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಆದ್ದರಿಂದ ಟವರ್ ವ್ಯಾಗನ್ ನಿಂತಿತ್ತು. ಆ ಬಳಿಕ ಅದರಲ್ಲಿ ಕಂಡು ಬಂದ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಅದು ಚಲಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಇದೇ ಟ್ರ್ಯಾಕ್ ಮೇಲೆ ಇಟಾರಸಿಯಿಂದ ಪವನ್ ಎಕ್ಸ್‌ಪ್ರೆಸ್ ರೈಲು ಬರುತ್ತಿತ್ತು. ಆದರೆ ಟವರ್ ವ್ಯಾಗನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ದೂರವೇ ನಿಲ್ಲಿಸಲಾಗಿತ್ತು. ತಾಂತ್ರಿಕ ದೋಷದ ಪರಿಣಾಮ ಈ ರೈಲು ಮುಂದೆ ಸಾಗದೆ ಇತರ ರೈಲು ಸಂಚಾರದಲ್ಲಿಯೂ ಅಡಚಣೆ ಉಂಟಾಗಿತ್ತು. ಇದರಿಂದ ಜನರೇ ರೈಲನ್ನು ತಳ್ಳಿಕೊಂಡು ಹೋಗುವಂತಾಯಿತು.
ಸಾಮಾನ್ಯವಾಗಿ ಇಂಥಹ ಸಮಸ್ಯೆ ಎದುರಾದಾಗ ಯಂತ್ರಗಳ ಸಹಾಯದಿಂದ ರೈಲನ್ನು ಚಲಿಸುವಂತೆ ಮಾಡಲಾಗುತ್ತದೆ. ಆದರೆ ಈ ಘಟನೆಯಲ್ಲಿ ಅದು ಆರಂಭದಲ್ಲಿ ಸಾಧ್ಯವಾಗದ ಕಾರಣ, ಜನರೇ ರೈಲನ್ನು ತಳ್ಳಿಕೊಂಡು ಹೋಗಿದ್ದಾರೆ. ನಂತರ ಅದನ್ನು ಸರಿಪಡಿಸಲಾಗಿದೆ. ಇದೀಗ ಅದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ.