ಮಂಟಪದಲ್ಲಿ ಮದುಮಗಳ ಮುಸುಕು ತೆಗೆದು ಬೆಚ್ಚಿ ಬಿದ್ದ ಮದುಮಗ: ಆದದ್ದೇನು?
Thursday, September 2, 2021
ಇಟವಾ (ಉತ್ತರ ಪ್ರದೇಶ): ಮದುವೆ ಮಂಟಪದಲ್ಲಿ ಮದುಮಗಳ ಮುಖಕ್ಕೆ ಹಾಕಿರುವ ಮುಸುಕನ್ನು ತೆಗೆಯುವಂತಿಲ್ಲದಿದ್ದರೂ ವರನೊಬ್ಬ ಏಕಾಏಕಿ ಮುಸುಕು ತೆಗೆದು ಮದುಮಗಳ ಮುಖನೋಡಿ ಬೆಚ್ಚಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಇಟವಾದಲ್ಲಿ ನಡೆದಿದೆ. ಈತ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಲು ಧಾವಿಸಲು ಯತ್ನಿಸಿದ್ದರೂ ವರನು ತೊಟ್ಟಿರುವ ಧೋತಿಯನ್ನೇ ಬಿಚ್ಚಿ ಮದುಮಗಳು ಶಾಕ್ ನೀಡಿದ್ದಾಳೆ.
ಉತ್ತರ ಪ್ರದೇಶದ ಇಟವಾ ಎಂಬಲ್ಲಿನ ಶತ್ರುಘ್ನ ಸಿಂಗ್ ಎಂಬ ಯುವಕನಿಗೆ ಮದುವೆ ಮಾಡಲು ಮನೆಯವರು ಹುಡುಗಿಯನ್ನು ಹುಡುಕುತ್ತಿದ್ದರು. ಆ ಸಂದರ್ಭ ಮದುವೆ ಬ್ರೋಕರ್ 20 ವರ್ಷದ ಹುಡುಗಿಯ ಫೋಟೋ ತೋರಿಸಿದ್ದಾನೆ. ಬಳಿಕ ವಧೂ-ವರರು ಇಬ್ಬರೂ ಪರಸ್ಪರ ನೋಡಿ ಒಪ್ಪಿದ್ದಾರೆ. ಜತೆಗೆ ಕುಟುಂಬದವರೊಂದಿಗೂ ಮಾತುಕತೆ ನಡೆಸಿ ಮದುವೆಯನ್ನೂ ನಿಗದಿ ಮಾಡಲಾಗಿತ್ತು.
ಆದರೆ ಪದ್ಧತಿಯಂತೆ ಮದುಮಗಳ ಮುಖವನ್ನು ಮುಸುಕಿನಿಂದ ಮುಚ್ಚಲಾಗುತ್ತದೆ. ಆದ್ದರಿಂದ ಮದುಮಗಳ ಮುಖವನ್ನು ಮುಚ್ಚಲಾಗಿತ್ತು. ಆದರೆ ಮದುವೆ ಮಂಟಪದಲ್ಲಿ ವಧುವಿನ ಕೈ ನೋಡಿ ವರನಿಗೂ ಆತನ ಪಾಲಕರಿಗೂ ಚಿಕ್ಕ ವಯಸ್ಸಿನ ಹುಡುಗಿಯ ಕೈ ಇದ್ದಂತಿಲ್ಲ ಎಂಬ ಸಂದೇಹ ಬಂದಿದೆ. ಇದೇ ವೇಳೆ ವರ ಹಿಂದೆ ಮುಂದೆ ನೋಡದೆ ವಧುವಿನ ಮುಖದ ಮೇಲಿದ್ದ ಮುಸುಕು ತೆಗೆದು ಹೌಹಾರಿ ಹೋಗಿದ್ದಾನೆ.
ಏಕೆಂದರೆ ಅಲ್ಲಿ ಇದ್ದುದು ಸುಮಾರು 45 ವರ್ಷದ ಮಹಿಳೆ. ಆಕೆಯನ್ನು ನೋಡಿ ವರನ ಪಾಲಕರಿಗೂ ದಿಗ್ಭ್ರಮೆಯಾಗಿದೆ. ತಕ್ಷಣ ಮದುವೆಯನ್ನು ನಿಲ್ಲಿಸಲಾಗಿದೆ. ತಾನು ಮೋಸ ಹೋಗಿರುವುದು ತಿಳಿದ ಯುವಕ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಲು ಮಂಟಪದಿಂದಲೇ ಓಡಿಹೋಗುವ ಪ್ರಯತ್ನ ಮಾಡಿದ. ಆಗ ಮಹಿಳೆ ಮತ್ತು ಆಕೆಯ ಕಡೆಯವರು ಆತನ ಧೋತಿ ಬಿಚ್ಚಿದರು. ನಂತರ ಬಲವಂತದಿಂದ ಈ ಮದುವೆಯನ್ನು ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಬಳಿಕ ತಿಳಿದದ್ದೇನೆಂದರೆ ಈ ಮಹಿಳೆ ಗಂಡ ಬಿಟ್ಟವಳು ಹಾಗೂ ಇಬ್ಬರು ದೊಡ್ಡ ಮಕ್ಕಳ ತಾಯಿ ಎಂದು. ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಕೂಡ ಮಾಡಲಾಗಿದೆ.
ಆದರೂ ಆತ ಬಿಡದೇ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಮಹಿಳೆ ಮತ್ತು ಮೋಸ ಮಾಡಿದ ಬ್ರೋಕರ್ ಮೇಲೆ ದೂರು ದಾಖಲು ಮಾಡಿದ್ದಾನೆ.