
ದುರಂತದಲ್ಲಿ ಮೃತರಾದ ಮೀನುಗಾರ ಶೆರೀಫ್ ಕುಟುಂಬಕ್ಕೆ ಪರಿಹಾರ ಒದಗಿಸಲು ಆಗ್ರಹ
Saturday, September 18, 2021
ವಾರದ ಹಿಂದೆ ಮೀನುಗಾರಿಕೆಯ ಸಂದರ್ಭ ದೋಣಿ ಮಗುಚಿ ಮೃತರಾದ ಕಸ್ಬಾ ಬೆಂಗ್ರೆಯ ನಿವಾಸಿ ಶೆರೀಫ್ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಧನ ನೀಡುವಂತೆ ಕೋರಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಹರೀಶ್ ಕುಮಾರ್ ಅವರಿಗೆ "ಸಾಂಪ್ರದಾಯಿಕ ಮೀನುಗಾರರ ಸಂಘ" ದ ವತಿಯಿಂದ ಮನವಿ ಸಲ್ಲಿಸಲಾಯಿತು.
ವೃದ್ದೆ ತಾಯಿ, ಸಹೋದರಿ, ಹೆಂಡತಿ, ಮೂರು ಸಣ್ಣ ಮಕ್ಕಳಿರುವ ಕುಟಂಬಕ್ಕೆ ಶೆರೀಫ್ ದುಡಿಮೆಯೇ ಆಧಾರವಾಗಿತ್ತು. ದಿಢೀರ್ ನಡೆದ ದುರಂತದಿಂದ ಮೃತ ಶೆರೀಫ್ ಕುಟುಂಬ ಯಾವ ಆಧಾರವೂ ಇಲ್ಲದೆ ಅನಾಥವಾಗಿದೆ. ದುರಂತ ಸಂಭವಿಸಿ ಏಳು ದಿನ ದಾಟಿದರೂ ಸರಕಾರದ ವತಿಯಿಂದ ಯಾವುದೆ ಪರಿಹಾರ ಲಭಿಸಿರುವುದಿಲ್ಲ. ಮಾನವೀಯ ಕಾಳಜಿಯಿಂದ ತಕ್ಷಣವೇ ಸರಕಾರದ ವತಿಯಿಂದ ಪರಿಹಾರ ಧನ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ವಿದ್ಯುತ್ ದೀಪ, ರಸ್ತೆ ಸಂಪರ್ಕ ಸರಿ ಪಡಿಸಲು ಆಗ್ರಹ
ಕಸ್ಬಾ ಬೆಂಗ್ರೆಯ ಸಾಂಪ್ರದಾಯಿಕ, ನಾಡದೋಣಿಗಳು ತಂಗುವ ತೀರದಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದೆ, ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಮೀನುಗಾರರು ವೃತ್ತಿ ನಿರ್ವಹಿಸಲು ಸಮಸ್ಯೆಗಳು ಉಂಟಾಗಿದ್ದು, ಅದ್ಯತೆಯಿಂದ ವಿದ್ಯುತ್ ಬೆಳಕು, ರಸ್ತೆ ಸಂಪರ್ಕ ಒದಗಿಸುವಂತೆ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಪಲ್ಗುಣಿ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷರಾದ ಅಬ್ದುಲ್ ತಯ್ಯೂಬ್,ಸರ್ಫರಾಝ್,ಸಾವಲ್,
ಫಹಾಝ್,ಮುದಸ್ಸಿರ್,ಇಮ್ತಿಯಾಝ್, ಇಮ್ರಾನ್,ಸೌಕತ್,ಅಶ್ರಫ್ ಉಪಸ್ಥಿತರಿದ್ದರು.