-->
ದ.ಕ ಜಿಲ್ಲೆಯಲ್ಲಿ ಶೇ.80ರಷ್ಟು ಮಂದಿಗೆ ಲಸಿಕೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ

ದ.ಕ ಜಿಲ್ಲೆಯಲ್ಲಿ ಶೇ.80ರಷ್ಟು ಮಂದಿಗೆ ಲಸಿಕೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ



ಮಂಗಳೂರು :- ಜಿಲ್ಲೆಯಲ್ಲಿ ಇದುವರೆಗೆ ಶೇ. 80ರಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಬಾಕಿ ಉಳಿದವರಿಗೂ ಕೂಡ ಲಸಿಕೆ ನೀಡಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ತಿಳಿಸಿದರು.



ಅವರು ಸೆಪ್ಟೆಂಬರ್ 17ರ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‍ಕ್ಲಬ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಇಂದಿನ ಲಸಿಕಾ ಅಭಿಯಾನ ಮಾಡಲಾಗುತ್ತಿದೆ, ಕಳೆದ ವಾರವೂ ಲಕ್ಷ ಮಂದಿಗೆ ಲಸಿಕೆ ಹಾಕಿಸುವ ಗುರಿ ಹಾಕಿಕೊಂಡು ಅಭಿಯಾನ ನಡೆಸಲಾಗಿತ್ತು, ಆದರೆ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿಲ್ಲ, ಈ ಬಾರಿಯ ಅಭಿಯಾನದಲ್ಲಿ 1.50 ಲಕ್ಷ ಡೋಸ್ ಲಸಿಕೆ ನೀಡುವ ಗುರಿಯಿಟ್ಟು ಅಭಿಯಾನ ನಡೆಸುತ್ತಿದ್ದೇವೆ. ಈ ಬಾರಿ ಸುಮಾರು 600ಕ್ಕೂ ಹೆಚ್ಚು ಕೇಂದ್ರಗಳನ್ನು ನಿಗದಿಪಡಿಸಿ ಲಸಿಕೆ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.


ಲಸಿಕೆ ಅಭಿಯಾನಕ್ಕೆ ಚುನಾವಣೆ ಮಾದರಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಬಹುತೇಕ ಎಲ್ಲ ಇಲಾಖೆಯ ಸಿಬ್ಬಂದಿಗಳನ್ನು ಈ ಅಭಿಯಾನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಈ ಅಭಿಯಾನವನ್ನು ಯಶಸ್ವಿಗೊಳಿಸಿ ಎಲ್ಲರಿಗೂ ಲಸಿಕೆ ಹಾಕಿಸುವಂತೆ ಮಾಡುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.1.3ರ ಆಸುಪಾಸಿನಲ್ಲಿದೆ. ಇದನ್ನು ಇನ್ನಷ್ಟು ಇಳಿಸುವ ಬಗ್ಗೆ ನಾವು ಗಮನ ಕೇಂದ್ರೀಕರಿಸುತ್ತಿದ್ದೇವೆ. ಸಾವಿನ ಪ್ರಮಾಣದಲ್ಲೂ ಇಳಿಕೆಯಾಗಿದೆ. ಅದರಲ್ಲೂ ಎರಡು ಡೋಸ್ ಲಸಿಕೆ ಹಾಕಿದವರಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ ಎಂದು ಅವರು ತಿಳಿಸಿದರು.
ಕೆಐಒಸಿಎಲ್ ಸಿಎಂಡಿ ಟಿ.ಸಾಮಿನಾಥನ್, ಮಹಾಪ್ರಭಂದಕ ರಾಮಕೃಷ್ಣ ರಾವ್, ಹಿರಿಯ ಅಧಿಕಾರಿಗಳಾದ ಮುರಳೀಧರ, ಮುರುಗೇಶ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪದಾಧಿಕಾರಿಗಳಾದ  ಪುಷ್ಪರಾಜ್.ಬಿ.ಎನ್, ಭಾಸ್ಕರ್ ರೈ ಕಟ್ಟ, ಸುರೇಶ್ ಪಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.


ವಿವಿಧೆಡೆ ಜಿಲ್ಲಾಧಿಕಾರಿಗಳ ಭೇಟಿ:
ತದನಂತರ ಜಿಲ್ಲಾಧಿಕಾರಿಯವರು ಬಿಗ್ ಬಜಾರ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಫೋರಂ ಮಾಲ್, ಲಯನ್ಸ್ ಕ್ಲಬ್, ಅದ್ಯಾರ್ ಪಂಚಾಯತ್, ಅದ್ಯಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹಲವೆಡೆ ಲಸಿಕಾ ಅಭಿಯಾನವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article