ಸಮುದ್ರದ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿಸುವ ವಿನೂತನ ವಿಧಾನ: ರಾಷ್ಟ್ರದಲ್ಲಿಯೇ ಮಂಗಳೂರಿನಲ್ಲಿ ಮೊದಲ ಪ್ರಯೋಗ
Friday, September 3, 2021
ಮಂಗಳೂರು: ಸಮುದ್ರದ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿಸುವ ವಿನೂತನ ತಂತ್ರಜ್ಞಾನವೊಂದನ್ನು ಮಂಗಳೂರಿನಲ್ಲಿರುವ ಬೋಟೊಂದಕ್ಕೆ ಅಳವಡಿಕೆ ಮಾಡಲಾಗಿದೆ. ಇನ್ನು ಮುಂದೆ ಹತ್ತಾರು ದಿನಗಳ ಕಾಲ ಸಮುದ್ರದಲ್ಲಿಯೇ ಇದ್ದು ಮೀನುಗಾರಿಕೆ ನಡೆಸುವ ಮೀನುಗಾರರು ನಿತ್ಯ ಬಳಕೆಯ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳುವ ತೊಂದರೆ ತಪ್ಪಿದಂತಾಗಿದೆ.
ಆಳ ಸಮುದ್ರ ಮೀನುಗಾರಿಕೆ ನಡೆಸುವವರಿಗೆ ಉಪ್ಪು ನೀರು ದೊರಕುತ್ತದೆಯೇ ಹೊರತು, ಸಿಹಿ ನೀರು ಸಿಗುವುದಿಲ್ಲ. ಅದಕ್ಕಾಗಿ ಅವರು ಲೀಟರ್ ಗಟ್ಟಲೆ ಶುದ್ಧ ನೀರನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿನೂತನ ತಂತ್ರಜ್ಞಾನದ ಮೂಲಕ ಸಮುದ್ರದ ಉಪ್ಪು ನೀರನ್ನೇ ಶುದ್ಧ ಕುಡಿಯುವ ನೀರನ್ನಾಗಿಸಿ ಪರಿವರ್ತನೆ ಮಾಡುವ ಉಪಕರಣವನ್ನು ಬೋಟ್ ಗೆ ಅಳವಡಿಕೆ ಮಾಡಲಾಗಿದೆ. ಆಸ್ಟ್ರೇಲಿಯಾದ ರೇಯನ್ಸ್ ರೈನ್ ಮ್ಯಾನ್ ಕಂಪೆನಿಯು ಈ ಉಪಕರಣವನ್ನು ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಂಗಳೂರಿನ ಮೀನುಗಾರಿಕಾ ಬೋಟ್ ಗೆ ಇದನ್ನು ಅಳವಡಿಕೆ ಮಾಡಲಾಗಿದೆ. ಈ ಉಪಕರಣದ ಮೂಲಕ ದಿನಕ್ಕೆ 2 ಸಾವಿರ ಲೀಟರ್ ನೀರನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆಯಂತೆ. ಈ ಮೂಲಕ ತಿಂಗಳಿಗೆ 60 ಸಾವಿರ ಲೀಟರ್ ನೀರನ್ನು ಉಳಿಕೆ ಮಾಡಬಹುದಂತೆ.
ಈ ಉಪಕರಣದಲ್ಲಿ ಎರಡು ಪೈಪ್ ಗಳಿದ್ದು, ಒಂದು ಪೈಪ್ ಸಮುದ್ರದಲ್ಲಿನ ನೀರನ್ನು ಸಕ್ ಮಾಡುತ್ತದೆ. ನೀರು ಶುದ್ಧೀಕರಣ ಪ್ರಕ್ರಿಯೆಯಿ ಉಪಕರಣದೊಳಗೆ ನಡೆಯುತ್ತದೆ. ಶುದ್ಧೀಕರಣಗೊಂಡ ನೀದು ಮತ್ತೊಂದು ಪೈಪ್ ಮೂಲಕ ಬರುತ್ತದೆ. ಈ ನೀರು ಸಿಹಿ ನೀರಿನಷ್ಟೇ ಶುದ್ಧವಾಗಿದ್ದು, ಕುಡಿಯಲು ಯೋಗ್ಯವಾಗಿದೆ ಎಂದು ಪ್ರಯೋಗಾಲಯದಲ್ಲಿ ದೃಢಗೊಂಡಿದೆ. ಈ ಉಪಕರಣದಲ್ಲಿ ಗಂಟೆಗೆ 160 ಲೀಟರ್ ಶುದ್ಧ ನೀರು ಉತ್ಪಾದನೆ ಆಗುತ್ತದೆ. ಈ ಉಪಕರಣಕ್ಕೆ 4.60 ಲಕ್ಷ ರೂ. ಇದ್ದು, ಮೀನುಗಾರರಿಗೆ 50% ಸಬ್ಸಿಡಿ ದರದಲ್ಲಿ ಕೇಂದ್ರ ಸರಕಾರ ಒದಗಿಸುವ ಭರವಸೆ ಇದೆ.