ಅತ್ಯಾಚಾರ ಆರೋಪಿಯನ್ನು ಒಎಲ್ಎಕ್ಸ್ ಸಹಕಾರದಿಂದ ಬಂಧಿಸಿದ ಪೊಲೀಸರು
Wednesday, September 1, 2021
ಕೊಚ್ಚಿ: ಅತ್ಯಾಚಾರ ಪ್ರಕರಣವೊಂದರ ಆರೋಪಿಯಾಗಿದ್ದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಪೊಲೀಸರು ಒಎಲ್ಎಕ್ಸ್ ಸಹಾಯದಿಂದ ಬಂಧಿಸಿರುವ ಘಟನೆ ನಡೆದಿದೆ.
ಅತ್ಯಾಚಾರ ಪ್ರಕರಣವೊಂದರ ಆರೋಪಿಯಾಗಿರುವ ಪ್ರವೀಣ್ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ಒಎಲ್ಎಕ್ಸ್ ಜಾಲತಾಣದ ಸಹಾಯದಿಂದ ಆರೋಪಿ ಪೊಲೀಸ್ ಖೆಡ್ಡಾಕ್ಕೆ ಸಿಲುಕಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿಯಾಗಿರುವ 30ರ ಹರೆಯದ ಆರೋಪಿ ಪ್ರವೀಣ್ 2019ರಲ್ಲಿ ಕೇರಳದ ಚೊಟ್ಟನಿಕ್ಕರ ದೇವಾಲಯದಲ್ಲಿ ಕೆಲಸಕ್ಕಿದ್ದನು. ಈ ಸಂದರ್ಭ ಓರ್ವ ಯುವತಿಯೊಂದಿಗೆ ಸಲುಗೆ ಬೆಳೆಸಿದ್ದು, ಬಳಿಕ ಅದು ಪ್ರೀತಿಗೆ ತಿರುಗಿದೆ. ಅಲ್ಲದೆ ಈತ ಆಕೆಗೆ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ. ಅಲ್ಲದೆ ಇಬ್ಬರೂ ಲೀವಿನ್ ರಿಲೇಶನ್ ಶಿಪ್ ನಲ್ಲಿ ಕೆಲ ಕಾಲ ಒಂದೇ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಯುವತಿಯು ಪ್ರವೀಣ್ ಬಳಿ ತಾನು ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದುದಾಗಿ ಹೇಳಿದ್ದಳು. ಆದರೆ ಆ ಬಳಿಕ ಆಕೆ ನಿರುದ್ಯೋಗಿ ಎಂದು ಪ್ರವೀಣ್ ಗೆ ತಿಳಿದುಬಂದಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಂಬಂಧ ಮುರಿದು ಬಿದ್ದಿತ್ತು. ನಂತರ ಪ್ರವೀಣ್ ಮೇಲೆ ಆಕೆ ಲೈಂಗಿನ ದೌರ್ಜನ್ಯ ನಡೆಸಿದ ಪ್ರಕರಣ ದಾಖಲಿಸಿದ್ದಳು. ಆಕೆ ಈಗ ಎರಡು ಮಕ್ಕಳ ತಾಯಿ ಎಂದು ತಿಳಿದುಬಂದಿದೆ.
ಆರೋಪಿ ಸೆರೆಗೆ ಹಲವು ಬಾರಿ ಪ್ರಯತ್ನಿಸಿದ್ದರೂ ಪೊಲೀಸರು ವಿಫಲರಾಗಿದ್ದರು. ಕಡೆಗೆ ಆರೋಪಿ ಪ್ರವೀಣ್ ತನ್ನ ಕಾರನ್ನು ಒಎಲ್ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ ಎನ್ನುವ ಸಂಗತಿ ಪೊಲೀಸರಿಗೆ ತಿಳಿಯಿತು. ಪೊಲೀಸರು ಗ್ರಾಹಕರ ಸೋಗಿನಲ್ಲಿ ವ್ಯವಹಾರ ಕುದುರಿಸಿದರು. ಕಾರು ಕೊಳ್ಳುವ ನೆಪದಲ್ಲಿ ಮಫ್ತಿಯಲ್ಲಿದ್ದ ಪೊಲೀಸರು ಆತ ಹೇಳಿದ್ದ ಸ್ಥಳಕ್ಕೆ ಬಂದು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.