
ಮಳೆಗಾಗಿ ಅಪ್ರಾಪ್ತ ಬಾಲಕಿಯರ ಬೆತ್ತಲೆ ಮೆರವಣಿಗೆ
ಮಧ್ಯಪ್ರದೇಶ: ಬರಪೀಡಿತ ಪ್ರದೇಶಗಳಲ್ಲಿ ಮಳೆ ಬರಿಸಲು ಕಪ್ಪೆ ಮದುವೆ, ಕತ್ತೆ ಮದುವೆಗಳನ್ನು ಮಾಡಿಸೋದು ಎಲ್ಲೆಡೆ ವರದಿಯಾಗುತ್ತಿರುತ್ತದೆ. ಆದರೆ ಮಧ್ಯಪ್ರದೇಶದ ದಮೋಹ್ ಎಂಬ ಬುಡಕಟ್ಟು ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಮನೆಮನೆಗೆ ತೆರಳಿ ಭಿಕ್ಷೆ ಬೇಡುವಂತೆ ಮಾಡಿದ್ದಾರೆ.
ದಮೋಹ್ ಜಿಲ್ಲೆಯಲ್ಲಿ ಮಳೆ ಕಾಣದೇ ವರ್ಷಗಳೇ ಆಗಿತ್ತು. ವರುಣ ದೇವ ತಮ್ಮ ಮೇಲೆ ಮುನಿಸಿಕೊಂಡಿದ್ದಾನೆಂದು, ಆತನನ್ನು ಶಾಂತಪಡಿಸಲು ಈ ಧಾರ್ಮಿಕ ಆಚರಣೆಯ ಭಾಗವಾಗಿ ಇದನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದಮೋಹ್ ಜಿಲ್ಲಾಡಳಿತದಿಂದ ವರದಿ ಕೇಳಿದೆ.
ಐದರಿಂದ ಆರು ವರ್ಷದ ಬಾಲಕಿಯರು ಬೆತ್ತಲೆಯಾಗಿದ್ದು, ತಮ್ಮ ಹೆಗಲ ಮೇಲೆ ಕಪ್ಪೆಗಳನ್ನು ಕಟ್ಟಿಕೊಂಡ ಮರದ ಬಾಣವನ್ನು ಹೊತ್ತು ಸಾಗಿದರೆ ಮಳೆ ಬರುತ್ತದೆ ಎಂಬ ಧಾರ್ಮಿಕ ನಂಬಿಕೆ ಈ ಜನರಲ್ಲಿದೆ. ಮಹಿಳೆಯರ ಗುಂಪು ಕೂಡಾ ಈ ಬಾಲಕಿಯರ ಹಿಂದೆ ನಡೆಯುತ್ತಾ ದೇವರ ಹಾಡುಗಳನ್ನು ಹಾಡುತ್ತಾ ತೆರಳಿದ್ದು ತಿಳಿದು ಬಂದಿದೆ.
ಈ ಹುಡುಗಿಯರು ಪ್ರತಿ ಮನೆಗೂ ಭೇಟಿ ನೀಡಿ ಕಾಳು, ಬೇಳೆ, ಹಿಟ್ಟು ಕೊಡುವಂತೆ ಕೇಳುತ್ತಾರೆ. ಸಂಗ್ರಹಿಸಿದ ವಸ್ತುಗಳಿಂದ ಅಡುಗೆ ಮಾಡಿ ದೇವಾಲಯದಲ್ಲಿ ಭಂಡಾರ ಸಮುದಾಯದವರಿಗೆ ಊಟ ದಾನ ಮಾಡಲಾಗುತ್ತದೆ. ಎಲ್ಲ ನಿವಾಸಿಗಳು ಆಚರಣೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಈ ಬಗ್ಗೆ ಪೊಲೀಸರು ಮಾತನಾಡಿದ್ದು, ಇದು ಇಲ್ಲಿಯ ಆಚರಣೆ. ಯುವತಿಯರ ಕುಟುಂಬಗಳ ಒಪ್ಪಿಗೆ ಇದೆ ಎಂದು ಹೇಳಿದ್ದಾರೆ. ಅದಾಗ್ಯೂ ಒತ್ತಾಯಪೂರ್ವಕವಾಗಿ ಈ ರೀತಿ ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಘಟನೆಯ ಬಗ್ಗೆ ದಮೋಹ್ ಜಿಲ್ಲೆಯ ಎಸ್.ಕೃಷ್ಣ ಚೈತನ್ಯ ಪ್ರತಿಕ್ರಿಯಿಸಿ, ಈ ಬಗ್ಗೆ ಎನ್ ಸಿಪಿಸಿಆರ್ ಗೆ ವರದಿ ಸಲ್ಲಿಸಲಾಗುತ್ತದೆ. ಈ ಘಟನೆಯಲ್ಲಿ ಬಾಲಕಿಯರ ಹೆತ್ತವರು ಭಾಗಿಯಾಗಿದ್ದು, ಎಲ್ಲರಿಗೂ ಮೂಢನಂಬಿಕೆ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದ್ದಾರೆ.