ಅಂಗನವಾಡಿ ಕಾರ್ಯಕರ್ತೆ ಸಮ್ಮುಖದಲ್ಲೇ ಅಪ್ರಾಪ್ತ ಜೋಡಿಯ ವಿವಾಹ...
Sunday, September 5, 2021
ನೆಲಮಂಗಲ: ಅಂಗನವಾಡಿ ಕಾರ್ಯಕರ್ತೆ ಸಮ್ಮುಖದಲ್ಲೇ ಅಪ್ರಾಪ್ತ ಪ್ರೇಮಿಗಳಿಬ್ಬರ ವಿವಾಹ ನಡೆದಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕಿ ಹಾಗೂ ಬಾಲಕನ ನಡುವೆ ಲವ್ ಆಗಿದೆ. ಇಬ್ಬರು ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು. ಬಾಲಕಿ ತಾಯಿ ಅಂಗನವಾಡಿ ಕಾರ್ಯಕರ್ತೆ. ಮಗಳ ಲವ್ ಸ್ಟೋರಿ ಗೊತ್ತಾಗುತ್ತಿದ್ದಂತೆ ಬಾಲಕಿ ತಾಯಿ, ಬಾಲಕ ಹಾಗೂ ಆತನ ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದರು. ಅಲ್ಲಿಯೇ ಏಕಾಏಕಿ ಮಗಳನ್ನು ಮದುವೆಯಾಗುವಂತೆ ಹೇಳಿ ಬಾಲಕನ ತಾಯಿ ಸಮ್ಮುಖದಲ್ಲೇ ಅಂಗನವಾಡಿ ಕಾರ್ಯಕರ್ತೆ ತನ್ನ ಮಗಳ ಮದುವೆ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಜು.27ರಂದು ವಿವಾಹ ನೆರವೇರಿದ್ದು, ಇ.ಸ್ಟಾಂಪ್ ಪತ್ರದಲ್ಲಿ ಬಾಲಕ ಹಾಗೂ ಆತನ ತಾಯಿ ಸಹಿ ಪಡೆದು ವಿವಾಹಕ್ಕೆ ಸಾಕ್ಷಿಧಾರನ್ನಾಗಿ ಮಾಡಿಕೊಂಡು ಅಂಗನವಾಡಿ ಕಾರ್ಯಕರ್ತೆ ಸಮ್ಮುಖದಲ್ಲೇ ಬಾಲಕಿಗೆ ಮಾಂಗಲ್ಯಧಾರಣೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸೆ.3ರಂದು ನಗರ ಪೊಲೀಸ್ ಠಾಣೆಯಲ್ಲಿ ಬಾಲಕ ಹಾಗೂ ಬಾಲಕಿಯ ವಿರುದ್ಧ ದಿನೇಶ್ ದೂರು ದಾಖಲಿಸಿದ್ದಾರೆ. ಬಾಲ್ಯವಿವಾಹ ಕಾನೂನು ಬಾಹೀರ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಂಗನವಾಡಿ ಕಾರ್ಯಕರ್ತೆಯೇ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಮೇಲಧಿಕಾರಿ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಸಿಡಿಪಿಒ ಲತಾ ಪ್ರತಿಕ್ರಿಯಿಸಿದ್ದಾರೆ.