ಪತಿ ಬಿಟ್ಟುಹೋದ ಪತ್ನಿಯನ್ನು ಮತ್ತೆ ಒಂದು ಸೇರಿಸಿದ ಮೊಬೈಲ್ ಚಾರ್ಜರ್...
Monday, September 6, 2021
ಬೆಂಗಳೂರು: ಗಂಡನ ಚಟವೊಂದನ್ನು ಸಹಿಸಲಾಗದೆ ಮನೆ ಬಿಟ್ಟು ಹೋದ ಪತ್ನಿಯನ್ನು ಮೊಬೈಲ್ ಫೋನ್ ಚಾರ್ಜರ್ ಮತ್ತೆ ಮನೆ ಸೇರುವಂತೆ ಮಾಡಿದೆ.
ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದ ನಿವಾಸಿ ಒರಿಸ್ಸಾ ಮೂಲದ ಯಮುನಾ (25) ಹಾಗೂ ಆಕೆಯ ಪತಿ ದಿನೇಶ್ ಈ ಪ್ರಕರಣದ ಕೇಂದ್ರಬಿಂದುಗಳು. ಇತ್ತೀಚೆಗೆ ದಿನೇಶ್ ಪಬ್ಜಿ ಹುಚ್ಚಿಗೆ ಬಿದ್ದಿದ್ದ. ಇದರಿಂದ ರೋಸಿ ಹೋಗಿದ್ದ ಯಮುನಾ ಒಡಿಶಾದ ತನ್ನೂರಿಗೆ ಹಿಂದಿರುಗಲು ಮುಂದಾಗಿದ್ದಳು. . ಮೆಟ್ರೋ ಹತ್ತಬೇಕೆನ್ನುವಷ್ಟರಲ್ಲಿ ತಾನು ಮೊಬೈಲ್ಫೋನ್ ಮನೆಯಲ್ಲೇ ಮರೆತು ಬಂದಿರುವುದು ಗಮನಕ್ಕೆ ಬಂದಿತ್ತು. ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ಬ್ಯಾಗ್ ಸಮೇತ ಮನೆಗೆ ತೆರಳಲು ಯಮುನಾಗೆ ಕಷ್ಟವಾಗಿತ್ತು. ಹೀಗಾಗಿ ತನ್ನ ಟ್ರಾಲಿ ಲಗೇಜ್ ಬ್ಯಾಗ್ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಎಕ್ಸಿಟ್‌ಗೇಟ್‌ನ ಬಳಿ ಇಟ್ಟು ಮನೆಗೆ ಹೋಗಿದ್ದಳು. ಇತ್ತ ಅನುಮಾನಾಸ್ಪದವಾಗಿ ಕಂಡು ಬಂದ ಟ್ರಾಲಿ ಬ್ಯಾಗ್ ಗಮನಿಸಿದ ಮೆಟ್ರೋ ಸಿಬ್ಬಂದಿ ಸಂಶಯಗೊಂಡು ಮೆಟಲ್ ಡಿಟೆಕ್ಟರ್ ಮೂಲಕ ಪರಿಕ್ಷಿಸಿದಾಗ ಸೌಂಡ್ ಬ್ಲಿಂಕ್ ಆಗಿತ್ತು. ಆತಂಕಗೊಂಡ ಸಿಬ್ಬಂದಿ ಟ್ರಾಲಿ ಬ್ಯಾಗ್‌ನಲ್ಲಿ ಬಾಂಬ್ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಬೈಯಪ್ಪನಹಳ್ಳಿ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ತಂಡದ ಸಿಬ್ಬಂದಿ ಜತೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಾಂಬ್ ನಿಷ್ಕ್ರಿಯ ತಂಡ ಮುನ್ನೆಚ್ಚರಿಕೆ ವಹಿಸಿ ಟ್ರಾಲಿ ಲಗೇಜ್ ಬ್ಯಾಗನ್ನು ತಮ್ಮ ಸಲಕರಣೆ ಸಹಾಯದಿಂದ ತೆರೆದಾಗ ಅದರೊಳಗೆ ಬಟ್ಟೆಗಳಿರುವುದನ್ನು ಕಂಡುಬಂದಿದೆ. ಬ್ಯಾಗ್‌ನಲ್ಲಿ ಯಾವುದೇ ಬಾಂಬ್ ಇಲ್ಲದಿರುವುದು ದೃಢಪಟ್ಟ ಬಳಿಕ ಮೆಟ್ರೋ ನಿಲ್ದಾಣದಲ್ಲಿ ನೆರೆದಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ಹೊತ್ತಿನ ಬಳಿಕ ಯಮುನಾ ಮೆಟ್ರೋ ನಿಲ್ದಾಣಕ್ಕೆ ಬಂದು ತನ್ನ ಬ್ಯಾಗ್‌ಗಾಗಿ ಹುಡುಕಾಡಿ ಮೆಟ್ರೋ ಸಿಬ್ಬಂದಿ ಬಳಿ ಬ್ಯಾಗ್ ಬಗ್ಗೆ ಕೇಳಿದಾಗ ನಿಜವಾಗಿ ನಡೆದ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೆಟ್ರೋ ನಿಲ್ದಾಣದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರಿಂದ ಇಷ್ಟೊಂದು ಸಮಸ್ಯೆಯಾಗುತ್ತದೆ ಎಂದುಕೊಂಡಿರಲಿಲ್ಲ ಎಂದು ಪೊಲೀಸರ ಬಳಿ ಯಮುನಾ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.