ಕೀರನ್ ಪೊಲಾರ್ಡ್ ರಿಂದ ಅಂಪೈರ್ ವಿರುದ್ಧವೇ ವಿಚಿತ್ರ ಪ್ರತಿಭಟನೆ: ವೈರಲ್ ಆಯ್ತು ವೀಡಿಯೋ
Thursday, September 2, 2021
ನವದೆಹಲಿ: ತಮ್ಮ ಸ್ಫೋಟಕ ಆಟದಿಂದ ಸುದ್ದಿಯಾಗುವ ವೆಸ್ಟ್ಇಂಡಿಸ್ ದಾಂಡಿಗ ಕೀರಾನ್ ಪೋಲಾರ್ಡ್ ತಮ್ಮ ವಿಚಿತ್ರ ವರ್ತನೆಯಿಂದಲೂ ಕೆಲವೊಮ್ಮೆ ಸುದ್ದಿಯಲ್ಲಿರುತ್ತಾರೆ. ಪೊಲಾರ್ಡ್ ಅವರ ಅನೇಕ ನಡವಳಿಕೆಗಳು ವೀಕ್ಷಕರಿಗೆ ನಗು ತರಿಸಿದರೆ, ಕೆಲವರಿಗೆ ಮುಜುಗರ ಉಂಟು ಮಾಡುತ್ತಿರುವುದು ಸುಳ್ಳಲ್ಲ.
ಐಪಿಎಲ್ನಲ್ಲಿ ಅವರು ಬಾಯಿಗೆ ಟೇಪ್ ಹಾಕಿಕೊಂಡು ಹಾಗೂ ಬೌಲರ್ ಕಡೆಗೆ ಬ್ಯಾಟ್ ಬೀಸಿ ಸುದ್ದಿಯಾಗಿದ್ದರು. ಇದೇ ರೀತಿಯ ಘಟನೆ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲೂ ಆಗಿದೆ. ಸಿಪಿಎಲ್ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಕೀರನ್ ಪೊಲಾರ್ಡ್ ಮಂಗಳವಾರ ನಡೆದ ಪಂದ್ಯದ ವೇಳೆ ಮೈದಾನದಲ್ಲಿಯೇ ಎಂದಿನಂತೆ ತಮ್ಮದೇ ಶೈಲಿಯಲ್ಲಿ ವಿಚಿತ್ರ ಹಾಗೂ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಎದುರಾಳಿ ಸೆಂಟ್ ಲೂಸಿಯಾ ಕಿಂಗ್ಸ್ ತಂಡದ ಆಟಗಾರ ವಹಾಬ್ ರಿಯಾಜ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ಮನ್ ಟಿಮ್ ಸೈಫರ್ಟ್ಗೆ ಎಸೆದ ಬಾಲ್ ಸ್ಟಂಪ್ನ ಹೊರಭಾಗಕ್ಕೆ ಹೋಯಿತು. ಆ ಬಾಲನ್ನು ಹೊಡೆಯುವ ಪ್ರಯತ್ನ ಮಾಡಿದಾದರೂ ಸೈಫರ್ಟ್ ಕೈಯಲ್ಲಿ ಆಗಲಿಲ್ಲ. ಬಾಲ್ ಸ್ಟಂಪ್ನಿಂದ ಹೊರಗಡೆ ಇದ್ದರಿಂದ ಸಹಜವಾಗಿಯೇ ಅಂಪೈರ್ ವೈಡ್ ನೀಡಬಹುದು ಅಂತಾ ಸೈಫರ್ಟ್ ಮತ್ತು ಪೊಲಾರ್ಡ್ ಅಂದುಕೊಂಡರು. ಆದರೆ, ಅಂಪೈರ್ ಇಬ್ಬರನ್ನು ನಿರಾಸೆಗೊಳಿಸಿದರು. ಆ ಎಸೆತವನ್ನು ವೈಡ್ ಎಂದು ಪರಿಗಣಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ನಾನ್ಸ್ಟ್ರೈಕ್ ವಿಭಾಗದಲ್ಲಿ ನಿಂತಿದ್ದ ಪೊಲಾರ್ಡ್ ಏನೂ ಮಾತನಾಡದೇ ಅಂಪೈರ್ನಿಂದ ಬಹಳ ಅಂತರ ಕಾಯ್ದುಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.