ಅಪ್ರಾಪ್ತ ಬಾಲಕನನ್ನು ನಂಬಿಸಿ ಬಾಡಿಗೆ ಮನೆಗೆ ಕರೆದೊಯ್ದ ಯುವತಿ...ಮುಂದಾಗಿದ್ದು ಮಾತ್ರ...!!
Sunday, September 5, 2021
ಪೊಲ್ಲಾಚಿ (ತಮಿಳುನಾಡು):ಅಪ್ರಾಪ್ತನ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿಯೊಬ್ಬಳು ಆತನನ್ನು ಮದುವೆ ಆಗಿರುವ ಘಟನೆ ತಮಿಳುನಾಡಿನ ಪೊಲ್ಲಾಚಿಯಲ್ಲಿ ನಡೆದಿದೆ.
ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡ್ತಿದ್ದ ಯುವತಿ, ತಾನು ವಾಸವಿದ್ದ ಏರಿಯಾದಲ್ಲಿದ್ದ 12ನೇ ತರಗತಿ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದಳು. ಅಪ್ರಾಪ್ತ ಒಮ್ಮೆ ಪೆಟ್ರೋಲ್ ಹಾಕಿಕೊಳ್ಳಲು ಬಂಕ್ಗೆ ಬಂದಿದ್ದಾನೆ. ಈ ಸಂದರ್ಭ ಅವರ ನಡುವೆ ಪರಿಚಯವಾಗಿದೆ. ಬಳಿಕ ಸ್ನೇಹ ಪ್ರೀತಿಯ ರೂಪ ಪಡೆದುಕೊಂಡಿದೆ. ಈ ವಿಚಾರ ಅಪ್ರಾಪ್ತ ಬಾಲಕನ ಪಾಲಕರಿಗೆ ತಿಳಿದಿದೆ. ಇದಾದ ಬಳಿಕ ಯುವತಿಯ ಮನೆಗೆ ತೆರಳಿದ ಬಾಲಕನ ಪಾಲಕರು ತಮ್ಮ ಮಗನೊಂದಿಗೆ ಇರುವ ಸಂಬಂಧವನ್ನು ಕಡಿದುಕೊಳ್ಳುವಂತೆ ಆಕೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ ಬಾಲಕ ಅನಾರೋಗ್ಯಕ್ಕೀಡಾಗುತ್ತಾನೆ. ನಂತರ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಬಾಲಕ ಡಿಸ್ಚಾರ್ಜ್ ಆಗಿ ಮನೆಗೆ ಹಿಂದಿರುಗುತ್ತಾನೆ. ಇದರ ಬೆನ್ನಲ್ಲೇ ಬಾಲಕನನ್ನು ಹತ್ತಿರದ ದೇವಸ್ಥಾನವೊಂದಕ್ಕೆ ಕರೆದೊಯ್ಯುವ ಆ ಯುವತಿ ನಾವಿಬ್ಬರು ಮದುವೆ ಆಗೋಣ ಇಲ್ಲದಿದ್ದರೆ ನಮ್ಮಿಬ್ಬರನ್ನು ಬೇರೆ ಮಾಡುತ್ತಾರೆಂದು ಹೇಳಿದ್ದಾಳೆ. ಇದಾದ ಬಳಿಕ ಇಬ್ಬರು ಕೊಯಮತ್ತೂರಿನ ಒಂದು ಬಾಡಿಗೆ ಮನೆಗೆ ತೆರಳಿದ್ದಾರೆ. ಇತ್ತ ಮಗ ಕಾಣದಿರುವುದನ್ನು ನೋಡಿದ ಪಾಲಕರು ಸಂಶಯಗೊಂಡು ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ನೀಡುತ್ತಾರೆ.
ಇಬ್ಬರನ್ನು ಕೊಯಮತ್ತೂರಿನಲ್ಲಿ ವಶಕ್ಕೆ ಪಡೆಯುವ ಪೊಲೀಸರು ಊರಿಗೆ ವಾಪಸ್ ಕರೆತರುತ್ತಾರೆ. ಬಾಲಕನನ್ನು ವಿಚಾರಿಸಿದಾಗ ಆಕೆ ನನ್ನನ್ನು ಬಲವಂತವಾಗಿ ಕರೆದೊಯ್ದಿದ್ದಳು ಎಂದಿದ್ದಾನೆ. ಅಲ್ಲದೆ, ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಳು ಎಂದು ತಿಳಿಸಿದ್ದಾನೆ. ಇದೀಗ ಯುವತಿಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ.