ಆನೆ ಘೀಳಿಟ್ಟಿದ್ದರಿಂದ ಬೆದರಿ ಓಡಿದ ವ್ಯಕ್ತಿ ಬಿದ್ದು ಮೃತ್ಯು
Tuesday, September 7, 2021
ಮಂಗಳೂರು: ಆನೆ ಘೀಳಿಗೆ ಬೆದರಿ ಓಡುವ ಭರದಲ್ಲಿ ದೇವಸ್ಥಾನ ಸಿಬ್ಬಂದಿ ಕಲ್ಲು ಹಾಸಿನ ನೆಲದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.
ಕಾರ್ಕಳ ಕೈಗಾರಿಕಾ ಪ್ರಾಂಗಣ ಬಳಿ ನಿವಾಸಿ, ಕೊಡ್ಯಡ್ಕ ಶ್ರೀಕ್ಷೇತ್ರದ ಸಿಬ್ಬಂದಿ ವಿಶ್ವನಾಥ ದೇವಾಡಿಗ(58) ಮೃತಪಟ್ಟವರು.
ಮೃತ ವಿಶ್ವನಾಥ ದೇವಾಡಿಗ ಅವರು ಮೂಡುಬಿದಿರೆ ತಾಲ್ಲೂಕಿನ ಕೊಡ್ಯಡ್ಕ ದೇವಾಲಯದಲ್ಲಿ ಕೂಲಿ ಕೆಲಸ ಮಾಡುವವರಾಗಿದ್ದರು. ನಿನ್ನೆ ಮಾವುತ ದೇವಾಲಯದ ಆನೆಗೆ ಹುರುಳಿ ತರಲೆಂದು ಹೋಗಿದ್ದರು. ಈ ಸಂದರ್ಭ ಕಾರ್ಯ ನಿಮಿತ್ತ ಆನೆ ಇರುವಲ್ಲಿಗೆ ವಿಶ್ವನಾಥ ದೇವಾಡಿಗ ಹೋಗಿದ್ದಾರೆ. ಆಗ ಆನೆ ಏಕಾಏಕಿ ಘೀಳಿಟ್ಟಿದೆ. ಪರಿಣಾಮ ಬೆದರಿದ ಅವರು ಅಲ್ಲಿಂದ ಓಟಕ್ಕಿತ್ತಿದ್ದಾರೆ. ಆದರೆ ಓಡುವ ಭರದಲ್ಲಿ ಅವರು ಕಲ್ಲು ಹಾಸಿನ ನೆಲದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ವಿಶ್ವನಾಥ ದೇವಾಡಿಗ ಮೃತಪಟ್ಟಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.