ವಿಸ್ಮಯ ಸಾವಿನ ಪ್ರಕರಣ... ಶಾಶ್ವತವಾಗಿ ಕೆಲಸ ಕಳೆದುಕೊಂಡ ಪಾಪಿ ಗಂಡ
Saturday, August 7, 2021
ತಿರುವನಂತಪುರ: ಯುವ ವೈದ್ಯೆ ವಿಸ್ಮಯ ಹಾಗೂ ಸಾರಿಗೆ ಅಧಿಕಾರಿಯಾಗಿದ್ದ ಕಿರಣ್ ಕುಮಾರ್ 2020 ಮೇ ನಲ್ಲಿ ಮದುವೆಯಾಗಿದ್ದರು.ಆದರೆ ಗಂಡನ ಹಣದಾಸೆ ವಿಸ್ಮಯ ಜೀವವನ್ನು ಬಲಿಪಡೆದುಕೊಂಡಿತ್ತು. ಗಂಡ ಮತ್ತು ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾವಿಗೂ ಮುನ್ನ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಮುಖ್ಯಮಂತ್ರಿಯಿಂದಲೂ ಖಂಡನೆ
ವಿಸ್ಮಯ ಸಾವಿನ ಪ್ರಕರಣ ಕೇರಳದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಘಟನೆಯನ್ನು ಖಂಡಿಸಿದ್ದರು. ಅಲ್ಲದೆ, ವಿಶೇಷ ತನಿಖೆ ನಡೆಸುವಂತೆ ಆದೇಶಿಸಿದ್ದರು.
ಕೇರಳ ಪೊಲೀಸರು ಕಿರಣ್ನನ್ನು ಬಂಧಿಸಿದ್ದರು. ಅಲ್ಲದೆ, ಅವರನ್ನು ಕೆಲಸದಿಂದ ಆ ಕ್ಷಣದಲ್ಲಿ ಅಮಾನತುಗೊಳಿಸಲಾಗಿತ್ತು. ಇದೀಗ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಯ ವಿರುದ್ಧ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ಇದರ ನಡುವೆ ಕಿರಣ್ರನ್ನು ಶಾಶ್ವತವಾಗಿ ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ. ಸದ್ಯ ಆರೋಪಿ ಕಿರಣ್ ವಿರುದ್ಧ ತನಿಖೆ ಮುಂದುವರಿದಿದ್ದು, ಬಂಧನದಲ್ಲಿದ್ದಾನೆ.