ತಾಲಿಬಾನ್ ಮತ್ತು ಅಫ್ಘಾನ್ ನಡುವೆ ಸಂಘರ್ಷ: ಬೀದಿಯಲ್ಲಿ ಮೃತದೇಹ, ಹೆಣ್ಣುಮಕ್ಕಳ ಅಪಹರಣ
Thursday, August 12, 2021
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಅಫ್ಘಾನ್ ಸರಕಾರ ಹಾಗೂ ಸೇನಾಪಡೆಗಳ ನಡುವೆ ಸಂಘರ್ಷ ಮುಂದುವರಿದಿದ್ದು, ಈಗಾಗಲೇ ತಾಲಿಬಾನ್, ಆಫ್ಘಾನ್ನ ಅನೇಕ ಪ್ರದೇಶಗಳನ್ನು ಆಕ್ರಮಿಸಲಾಗಿದೆ. ತಾಲಿಬಾನಿಗಳ ಅಟ್ಟಹಾಸದ ಕತೆಯನ್ನು ಅಫ್ಘಾನ್ನರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ತಾಲಿಬಾನ್ ಆಕ್ರಮಿಸಿರುವ ಉತ್ತರ ಅಫ್ಘಾನ್ ನನ್ನು ತೊರೆದು ಸಾವಿರಾರು ಆಫ್ಘನ್ನರು ಫಲಾಯನ ಮಾಡಿದ್ದಾರೆ. ಹೀಗೆ ಓಡಿಹೋದ ಅಫ್ಘಾನ್ನರು ತಾಲಿಬಾನಿಗಳ ಕ್ರೂರ ವರ್ತನೆಯ ಬಗ್ಗೆ ಹೇಳುತ್ತಿದ್ದಾರೆ. ರಸ್ತೆಯಲ್ಲಿ ಮೃತದೇಹಗಳು ಕಾಣಸಿಗುತ್ತಿವೆ. ಅಲ್ಲದೆ ತಮ್ಮ ಕಾಮತೃಷೆಗೆ ಹುಡುಗಿಯರನ್ನು ತಾಲಿಬಾನಿಗಳು ಅಪಹರಿಸುತ್ತಿದ್ದಾರೆ ಮತ್ತು ಯುವಕರು ಗುಂಪು-ಗುಂಪಾಗಿ ಹೋರಾಡುತ್ತಿದ್ದಾರೆ ಎಂದು ಆಫ್ಘಾನ್ನರು ಹೇಳಿದ್ದಾರೆ. ತಾಲಿಬಾನಿಗಳ ಅಟ್ಟಹಾಸ ಸಹಿಸದೇ ಅನೇಕರು ಕಳೆದ ವಾರವಷ್ಟೇ ಕಾಬೂಲ್ಗೆ ಆಗಮಿಸಿದ್ದಾರೆ. ಅವರು ತಾಲಿಬಾನಿಗಳ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಜೈಲಿನ ಬಳಿ ಮೃತದೇಹಗಳನ್ನು ಬಿದ್ದಿರುವುದನ್ನು ನೋಡಿದ್ದೇವೆ. ಮೃತದೇಹಗಳ ಮಧ್ಯೆಯೇ ನಾಯಿಗಳು ಸಹ ಸತ್ತುಬಿದ್ದಿದ್ದವು ಎಂದು 36 ವರ್ಷದ ವಿಧವೆ ಫ್ರಿಬಾ ಎಂಬಾಕೆ ತಾಲಿಬಾನಿಗಳ ಕ್ರೂರ ಮುಖವಾಡವನ್ನು ಕಳಚಿದ್ದಾರೆ.
ಅಫ್ಘಾನ್ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿರುವವರನ್ನು ತಾಲಿಬಾನಿಗಳು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ನನ್ನ ಮಗನ ತಲೆಯನ್ನು ಕುರಿ ಕಡಿಯುವ ಹಾಗೇ ಕಡಿದು ನನ್ನ ಮುಂದೆಯೇ ಬೀಸಾಡಿದರು ಎಂದು ತಾಲಿಬಾನ್ ಆಕ್ರಮಿತ ಕುಂದ್ಜ್ನಿಂದ ಬಂದ ವ್ಯಕ್ತಿ ಅಬ್ದುಲ್ಮನನ್ ಬಿಚ್ಚಿಟ್ಟಿದ್ದಾರೆ. ದಿನನಿತ್ಯವೂ ತಾಲಿಬಾನಿಗಳ ದೌರ್ಜನ್ಯ ಮುಂದುವರಿದಿದೆ. ತಾಲಿಬಾನ್ ಹೋರಾಟಗಾರನನ್ನು ಬಲವಂತವಾಗಿ ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ 25 ವರ್ಷ ವಿಧವೆ ಮಾರ್ವಾ ಎಂಬಾಕೆ ಅಲ್ಲಿಂದ ತಪ್ಪಿಸಿಕೊಂಡು ಕಾಬೂಲ್ ಸೇರಿದ್ದಾಳೆ. ಆಕೆಯ 16 ವರ್ಷ ಸೋದರಸಂಬಂಧಿಯನ್ನು ಬಲವಂತವಾಗಿ ಕರೆದೊಯ್ದು ಮದುವೆ ಮಾಡಲಾಗಿದೆ ಎಂದು ತಿಳಿಸಿದ್ದಾಳೆ. ಅನೇಕ ಹುಡುಗಿಯರನ್ನು ಅಪಹರಣ ಮಾಡಲಾಗುತ್ತಿದೆ ಎಂದು ತಾಲಿಬಾನ್ ವಿರುದ್ಧ ಆರೋಪ ಮಾಡಲಾಗಿದೆ. ಏನಿದು ಸಂಘರ್ಷ?
ಆಫ್ಘಾನ್ ವಲಯದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್ ಮತ್ತು ಆಫ್ಘಾನ್ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದೆ. ಕಳೆದ ಕೆಲವು ತಿಂಗಳುಗಳಿಂದ, ಯುದ್ಧ ಪೀಡಿತ ದೇಶದಲ್ಲಿ ತಾಲಿಬಾನ್ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಆಸ್ತಿಗಳನ್ನು ಟಾರ್ಗೆಟ್ ಮಾಡಲು ಪಾಕಿಸ್ತಾನವು ತಾಲಿಬಾನ್ಗೆ ಸಹಕಾರ ನೀಡುತ್ತಿರುವ ಆರೋಪವು ಕೇಳಿಬಂದಿದೆ.
ತೀವ್ರ ಘರ್ಷಣೆ ಹಿನ್ನೆಲೆಯಲ್ಲಿ ಜುಲೈ 11 ರಂದು ಕಂದಹಾರ್‌ನ ಕಾನ್ಸುಲೇಟ್‌ನಿಂದ ಭಾರತೀಯ ಸಿಬ್ಬಂದಿಯನ್ನು ಸ್ಥಳಾಂತರಿಸಿ ಮತ್ತೆ ಭಾರತಕ್ಕೆ ಕರೆತರಲಾಯಿತು. ಗುಪ್ತಚರ ವರದಿಗಳು ಕಂದಹಾರ್ ಮತ್ತು ಮಜಾರ್-ಎ-ಶೇರ್ಫ್‌ನಲ್ಲಿರುವ ಭಾರತೀಯ ದೂತಾವಾಸಗಳಿಗೆ ಬೆದರಿಕೆ ಹೆಚ್ಚಾಗಿದೆ ಎಂದು ಸೂಚಿಸಿದೆ.