ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮತ್ತೆ ರಾರಾಜಿಸುತ್ತಿರುವ ಬಿಜೆಪಿ ನಾಯಕನ ಫೋಟೋ
Monday, August 2, 2021
ಮಂಗಳೂರು: ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹರಿದು ಹಾಕಲಾಗಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಅವರ ಫೋಟೋ ಮತ್ತೆ ರಾರಾಜಿಸುತ್ತಿದೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಒಳಪ್ರವೇಶಿಸುವಲ್ಲಿನ ಗೋಡೆಯಲ್ಲಿ ರಾಜ್ಯದಲ್ಲಿ ಸಿಎಂ ಆಗಿದ್ದವರ ಫೋಟೋವನ್ನು ಹಾಕಲಾಗಿದೆ. ಆದರೆ ಕೆಲ ವರ್ಷಗಳ ಹಿಂದೆ ಬಿಜೆಪಿ ಪಕ್ಷ ಸೇರಿದ ಎಸ್ ಎಂ ಕೃಷ್ಣ ಅವರ ಫೋಟೋವನ್ನು ಕಾರ್ಯಕರ್ತರು ಹರಿದು ಹಾಕಿದ್ದರು.
ಈ ಹಿಂದೆ ಎರಡು ಬಾರಿ ಹರಿದು ಹಾಕಿರುವ ಫೋಟೋವನ್ನು ಮತ್ತೆ ಅಂಟಿಸಲಾಗಿತ್ತು. ಆದರೆ ಇತ್ತೀಚೆಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿರುವ ವೇಳೆಯಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದರು. ಈ ಸಂದರ್ಭ ಎಸ್ ಎಂ ಕೃಷ್ಣ ಅವರ ಫೋಟೋವನ್ನು ಕೆಲ ಕಾರ್ಯಕರ್ತರು ಮೂರನೇ ಬಾರಿ ಹರಿದು ಹಾಕಿದ್ದರು. ಇದೀಗ ಮತ್ತೆ ಆ ಫೋಟೋವನ್ನು ಮತ್ತೆ ಅಂಟಿಸಲಾಗಿದೆ.