ರಾಜ್ಯದಲ್ಲಿ ನಿಲ್ಲದ ಕಾಮುಕರ ಅಟ್ಟಹಾಸ: ಡಾಬಾದ ಮಾಲಕನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
Sunday, August 29, 2021
ವಿಜಯಪುರ: ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ 16 ವರ್ಷದ ಬಾಲಕಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದ ಘಟನೆ ನಡೆದಿತ್ತು. ಇದೀಗ ವಿಜಯಪುರ ಜಿಲ್ಲೆಯಲ್ಲೂ 13 ವರ್ಷದ ಬಾಲಕಿಯ ಮೇಲೆ ಕಾಮುಕನೋರ್ವ ಅಟ್ಟಹಾಸ ಮೆರೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ತಂದೆಯೊಂದಿಗೆ 13 ವರ್ಷದ ಬಾಲಕಿ ವಾಸವಿದ್ದಳು. ಇದೀಗ ಡಾಬಾದ ಮಾಲೀಕನೇ ಈ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ದೂರು ನೀಡಿದ್ದಾರೆ.
ಆರೋಪಿ ದೇವಿಂದ್ರ ಆ.23 ಹಾಗೂ ಆ.24ರಂದು ನನ್ನ ಮಗಳನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆಯ ತಂದೆ ಶುಕ್ರವಾರ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್ಪಿ ಡಾ.ರಾಮ ಅರಸಿದ್ದಿ, ಇಂಡಿ ಡಿವೈಎಸ್ಪಿ, ಸಿಪಿಐ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.