
ತಂದೆಯ ಮೇಲಿನ ಹಗೆತನಕ್ಕೆ ಅಪ್ರಾಪ್ತ ಮಗಳ ಮೊಬೈಲ್ ಗೆ ಅಶ್ಲೀಲ ವೀಡಿಯೋ ರವಾನಿಸುತ್ತಿದ್ದ ಮಹಿಳೆ: ಪೊಕ್ಸೊ ಪ್ರಕರಣ ದಾಖಲು
ಭೋಪಾಲ್: ತಂದೆಯ ಮೇಲಿನ ಹಗೆತನಕ್ಕೆ ಮಹಿಳೆಯೋರ್ವರು ಆತನ ಅಪ್ರಾಪ್ತ ಮಗಳ ಮೊಬೈಲ್ ಗೆ ಅಶ್ಲೀಲ ವೀಡಿಯೋಗಳನ್ನು ಕಳುಹಿಸುತ್ತಿದ್ದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಈ ಸಂಬಂಧ ವೀಡಿಯೋ ಕಳುಹಿಸುತ್ತಿದ್ದ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಮಹಿಳೆಯ ಬಂಧಿಸುವ ಸಾಧ್ಯತೆ ಇದೆ.
ಆರೋಪಿತ ಮಹಿಳೆ ಹಾಗೂ ಬಾಲಕಿಯ ತಂದೆಯ ನಡುವೆ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವಿತ್ತು. ಈ ಸಂಬಂಧ ಇವರಿಬ್ಬರ ನಡುವೆ ಜಗಳವೂ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಪ್ರತಿಕಾರ ತೀರಿಸಿಕೊಳ್ಳಲು ಆತನ 11 ವರ್ಷ ವಯಸ್ಸಿನ ಮಗಳ ಮೊಬೈಲ್ ಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಮಾನಸಿಕ ಹಿಂದೆ ನೀಡುತ್ತಿದ್ದಾಳೆ ಎಂದು ಬಾಲಕಿಯ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.
ಬಾಲಕಿಯ ಮೊಬೈಲ್ ಗೆ ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದಾಳೆ ಎಂದು ತಿಳಿಯುತ್ತಿದ್ದಂತೆಯೇ ಪೋಷಕರು ಮಹಿಳೆಗೆ ಎಚ್ಚರಿಕೆ ನೀಡಿದ್ದರು. ಆದರೂ ಆಕೆ ತನ್ನ ಚಾಳಿಯನ್ನು ಮುಂದುವರಿಸಿದ್ದಳು. ಇದರಿಂದ ಬೇಸತ್ತ ಬಾಲಕಿಯ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಬಾಲಕಿಯ ಪೋಷಕರ ದೂರಿನನ್ವಯ ಆರೋಪಿ ಮಹಿಳೆಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಐಟಿ ಆ್ಯಕ್ಟ್ ನಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಮಹಿಳೆ ತಲೆ ಮರೆಸಿಕೊಂಡಿದ್ದು, ಆಕೆ ಭೋಪಾಲ್ ನಲ್ಲಿ ಅಡಗಿದ್ದಾಳೆ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಶೀಘ್ರವೇ ಆಕೆಯ ಬಂಧನವಾಗುವ ಸಾಧ್ಯತೆ ಇದೆ.