ಅವರಿಬ್ಬರ ಪ್ರೀತಿಗೆ 'Noo' ಎಂದ ಪ್ರೇಯಸಿಯ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಕೊಂದ ಪಾಗಲ್ ಪ್ರೇಮಿ..
Thursday, August 26, 2021
ನೆಲಮಂಗಲ: ತಾನು ಪ್ರೀತಿಸಿದ ಯುವತಿಯನ್ನು ತನ್ನೊಂದಿಗೆ ಮದುವೆ ಮಾಡಿಕೊಡಲು ನಿರಾಕರಿಸಿದ ಪ್ರೇಯಸಿಯ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಕುವೆಂಪುನಗರದ ನಾಗಪ್ಪ (49) ಕೊಲೆಯಾದವ. ನರೇಶ್ (28) ಕೊಲೆ ಆರೋಪಿ. ನಾಗಪ್ಪನ ಮನೆಯ ಪಕ್ಕದಲ್ಲೇ ನರೇಶ್ ವಾಸವಾಗಿದ್ದ. ಕಳೆದೆರಡು ವರ್ಷಗಳಿಂದ ನಾಗಪ್ಪನ ಹಿರಿಯ ಮಗಳು ಹಾಗೂ ನರೇಶ್ ಪ್ರೀತಿಸುತ್ತಿದ್ದರು. ಆದರೆ, ನಾಲ್ಕೈದು ದಿನಗಳಿಂದ ಯುವತಿ ನರೇಶ್‌ಗೆ ಕರೆ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಯುವಕ ಕುಡಿದು ಬಂದು ಯುವತಿಯ ಕಾಲೇಜು ಬಳಿ ಹೋಗಿ ಆಕೆಯೊಂದಿಗೆ ಜಗಳವಾಡಿ, ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದನಂತೆ.
ಅದೇ ದಿನ ರಾತ್ರಿ ನರೇಶ್ ತನ್ನ ಸ್ನೇಹಿತನ ಜತೆ ನಾಗಪ್ಪನ ಮನೆಗೆ ಬಂದಿದ್ದ. ನಿಮ್ಮ ಮಗಳು ಮತ್ತು ನಾನು 2 ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದ. ಇದಕ್ಕೆ ನಾಗಪ್ಪ ನಿರಾಕರಿಸಿದ್ದಕ್ಕೆ ಕೆಲಸಕ್ಕೆ ತೆರಳುತ್ತಿದ್ದ ನಾಗಪ್ಪನನ್ನು ಅಡ್ಡಗಟ್ಟಿದ ನರೇಶ್, ಕಬ್ಬಿಣದ ರಾಡ್‌ನಿಂದ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯಕ್ಕೆ ಸ್ನೇಹಿತ ವರುಣ್ ಎಂಬಾತನ ನೆರವು ಪಡೆದುಕೊಂಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಾಗಪ್ಪ ಮೃತಪಟ್ಟಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.