
ಪ್ರೀತಿಸಿದಾಕೆ ಮತ್ತೋರ್ವನೊಂದಿಗೆ ಮದುವೆಯಾದ ಸಿಟ್ಟಿಗೆ ಪ್ರಿಯತಮೆಯ ಕತ್ತು ಹಿಸುಕಿ ಕೊಂದ ಪ್ರಿಯಕರ!
Wednesday, August 11, 2021
ಹೈದರಾಬಾದ್(ತೆಲಂಗಾಣ): ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿರುವ ಯುವತಿಯನ್ನು ಆಕೆಯ ಪ್ರಿಯಕರನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹೈದರಾಬಾದ್ನ ಜೀಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ.
ಬಿಹಾರ ಮೂಲದವಳಾದ ಯುವತಿ ಪೂಜಾ(21) ಮದುವೆಯಾದ ಬಳಿಕ ಆಕೆಯ ಪತಿ ರಾಜೇಂದ್ರನ್ ವರ್ಮಾ ಹೈದರಾಬಾದ್ ಗೆ ಕೆಲಸದ ನಿಮಿತ್ತ ಬಂದಿದ್ದ. ಆಗ ಆತನೊಂದಿಗೆ ಪೂಜಾಳೂ ಬಂದಿದ್ದಳು. ಆಕೆಯು ಮದುವೆಗಿಂತ ಮೊದಲು ರಾಕೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಮದುವೆಯಾದ ಬಳಿಕವೂ ಆಕೆ ಆತನೊಂದಿಗೆ ಸಂಪರ್ಕದಿಂದಿದ್ದು, ಪತಿಗೆ ತಿಳಿಯದಂತೆ ಫೋನ್ನಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ ಪೂಜಾಳನ್ನು ಭೇಟಿ ಮಾಡಲು ರಾಕೇಶ್ ಬಿಹಾರದಿಂದ ಹೈದರಾಬಾದ್ಗೆ ಬಂದಿದ್ದ ಎನ್ನಲಾಗಿದೆ.
ಗಂಡ ಕೆಲಸಕ್ಕೆ ಹೋಗಿದ್ದರಿಂದ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಸಂಧಿಸಿದ್ದಾರೆ. ಈ ವೇಳೆ, ಪೂಜಾಳನ್ನು ತನ್ನೊಂದಿಗೆ ಬರುವಂತೆ ರಾಕೇಶ್ ಹೇಳಿದ್ದಾನೆ. ಆದರೆ ಆಕೆ ನಿರಾಕರಣೆ ಮಾಡಿದಕ್ಕಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.