ಸಹೋದರಿಯರ ಮರ್ಡರ್ ಮಾಡಿದಾತ ಮೂರೇ ದಿನಗಳಲ್ಲಿ ಪೊಲೀಸ್ ಬಲೆಗೆ
Monday, August 2, 2021
ದಾವಣಗೆರೆ: ದಾವಣಗೆರೆಯಲ್ಲಿ ನಡೆದಿದ್ದ ಸಹೋದರಿಯರಿಬ್ಬರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯನ್ನು ಮೂರೇ ದಿನಗಳಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆಗೀಡಾಗಿರುವ ಸಹೋದರಿಯರಲ್ಲಿ ಓರ್ವಳ ಪತಿಯೇ ಆರೋಪಿಯಾಗಿರೋದು ದುರಂತ.
ಸಹೋದರಿಯರ ಕೊಲೆ ಪ್ರಕರಣದ ಬಗ್ಗೆ ಮುತುರ್ವಜಿ ವಹಿಸಿ ಕಾರ್ಯಾಚರಣೆಗಿಳಿದ ದಾವಣಗೆರೆ ವಿದ್ಯಾನಗರದ ಪೊಲೀಸರು ಆರೋಪಿ ಮಂಜುನಾಥ (46)ನನ್ನು ಬಂಧಿಸಿದ್ದಾರೆ. ಆರೋಪಿ ತನ್ನ ಪತ್ನಿ ಗೌರಮ್ಮ (34) ಹಾಗೂ ಆಕೆಯ ತಂಗಿ ರಾಧಮ್ಮ (32) ಅವರನ್ನು ಕೊಲೆ ಮಾಡಿದ್ದ. ನಗರದ ಆಂಜನೇಯ ಮಿಲ್ ಬಡಾವಣೆಯ ಮನೆಯೊಂದರಲ್ಲಿ ಕೊಲೆ ನಡೆದಿತ್ತು. ಕೊಲೆ ನಡೆದ ಏಳು ದಿನಗಳ ಬಳಿಕ ಅಂದರೆ ಜುಲೈ 30ರಂದು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಸಹೋದರಿಯರಿಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಆರೋಪಿ ಮಂಜುನಾಥ ಪತ್ನಿಯ ಶೀಲ ಶಂಕಿಸಿದ್ದ ಪತಿ, ಹೆಂಡತಿಯ ಜತೆಗೆ ಆಕೆಯ ತಂಗಿಯನ್ನೂ ಕೊಲೆ ಮಾಡಿದ್ದ. ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಬೆಂಗಳೂರಿನ ಚನ್ನಾಪುರದಲ್ಲಿ ಪತ್ತೆ ಮಾಡಿದ ಪೊಲೀಸರು ಬಂಧಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.