ಪರಪುರುಷನೊಂದಿಗೆ ಓಡಿಹೋದ ಪತ್ನಿ...! ಅತ್ತೆ-ಮಾವನಿಗೆ ಚಿತ್ರಹಿಂಸೆ ಕೊಟ್ಟು ವಿಕೃತಿ ಮೆರೆದ ಅಳಿಯ..
Friday, August 13, 2021
ಗುಜರಾತ್: ತನ್ನ ಪತ್ನಿ ಪರಪುರುಷನೊಂದಿಗೆ ಓಡಿ ಹೋಗಿದ್ದಾಳೆ ಎಂಬ ಕಾರಣಕ್ಕೆ ಆತ ಆಕೆಯ ತವರು ಮನೆಗೆ ಚಿತ್ರಹಿಂಸೆ ನೀಡಿರುವ ಘಟನೆಯೊಂದು ನಡೆದಿದೆ.
ಧೇಲಾ ಎಂಬಾತನ ಪತ್ನಿ ಕೋಲಿ ಎರಡು ತಿಂಗಳ ಹಿಂದೆ ತವರು ಮನೆಗೆ ಹೋದಾಗ ವಾಪಸ್ ಬರಲೇ ಇಲ್ಲ. ತನ್ನ ಪತ್ನಿಯಲ್ಲಿ ಎಂದು ವಿಚಾರಿಸಲು ಹೋದಾಗ ಆತನಿಗೆ ಆಕೆ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ ಎಂಬುದು ತಿಳಿದುಬಂದಿದೆ. ಈ ಸುದ್ದಿ ಕೇಳಿ ಕುಪಿತಗೊಂಡ ಅಳಿಯ ಅತ್ತೆ-ಮಾವ ಮತ್ತು ಇವರ ಕುಟುಂಬಸ್ಥರಿಗೆ ಸತ್ವ ಪರೀಕ್ಷೆ ಮಾಡಿ ಇದೀಗ ಜೈಲು ಸೇರಿದ್ದಾನೆ.
ಪತ್ನಿಯ ತವರು ಮನೆಯವರನ್ನು ತನ್ನೂರಿಗೆ ಕರೆಸಿಕೊಂಡ ಅಳಿಯ, ‘ನಿಮ್ಮ ಮಗಳು ಪರಪುಷನೊಂದಿಗೆ ಓಡಿಹೋಗುವಲ್ಲಿ ನಿಮ್ಮ ಪಾತ್ರವೂ ಇದೆ. ನಿಮ್ಮ ಕುಮ್ಮಕ್ಕಿನಿಂದಲೇ ಆಕೆ ಗಂಡನನ್ನು ತೊರೆದು ಪ್ರಿಯಕರನ ಹಿಂದೆ ಹೋಗಿರೋದು’ ಎಂದು ಮನಸೋಇಚ್ಛೆ ಬೈದಿದ್ದಾನೆ. ‘ನಮಗೇನೂ ಗೊತ್ತಿಲ್ಲ’ ಎಂದು ಅವರು ಎಷ್ಟೇ ಹೇಳಿದರೂ ಇದನ್ನು ಒಪ್ಪದ ಧೇಲಾ ಕುಟುಂಬ, ‘ನಿಮ್ಮ ಪಾತ್ರ ಏನೂ ಇಲ್ಲ ಎಂದಾದರೆ ಕುದಿಯುವ ಎಣ್ಣೆಯಲ್ಲಿ ಕೈಗಳನ್ನು ಅದ್ದಿ ಸತ್ಯ ಸಾಬೀತು ಮಾಡಿ’ ಎಂದು ಷರತ್ತು ಹಾಕಿದೆ. ಇದಕ್ಕಾಗಿ ಧೇಲಾ ಕುಟುಂಬ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿತ್ತಂತೆ. ಎಣ್ಣೆಗೆ ಕೈ ಹಾಕದಿದ್ದಲ್ಲಿ ಗ್ರಾಮಸ್ಥರಿಂದ ಹೊಡೆಸಲು ಸ್ಕೆಚ್ ಕೂಡ ಹಾಕಿತ್ತಂತೆ. ಇವರ ಕಿರುಕುಳ ತಾಳಲಾರದೆ ಆಕೆಯ ತಂದೆ-ತಾಯಿ ಸೇರಿ 6 ಮಂದಿ ಕುದಿಯುವ ಎಣ್ಣೆಗೆ ಕೈ ಹಾಕಿದ್ದು, ಎಲ್ಲರ ಕೈ ಸುಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ತೆ-ಮಾವ ಮತ್ತು ಅವರ ಕುಟುಂಬಸ್ಥರಿಗೆ ಶಿಕ್ಷೆಕೊಟ್ಟು ವಿಕೃತಿ ಮೆರೆದಿದ್ದ ಅಳಿಯ ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.