ಸುಳ್ಯ; ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ನೀರುಪಾಲು
Sunday, August 8, 2021
ಮಂಗಳೂರು: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಸೇರಿ ಮಗುವೂ ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮ ಎಂಬಲ್ಲಿ ನಡೆದಿದೆ.
ಮೆಲ್ಕಾರ್ ನಿವಾಸಿ ಅಮಿತ್ ಎಂಬವರ ಪತ್ನಿ ಸಂಗೀತಾ(30) ಮತ್ತು ಮಗು ನಾಲ್ಕು ವರ್ಷದ ಅಭಿಮನ್ಯು ಮೃತಪಟ್ಟವರು.
ಸಂಗೀತಾ ಅವರು ಮೆಲ್ಕಾರ್ ನಲ್ಲಿರುವ ಪತಿಯ ಮನೆಯಿಂದ ನೆಲ್ಲೂರು ಕೇಮ್ರಾಜೆ ಗ್ರಾಮದ ಮಾಪಲಕಜೆಯಲ್ಲಿ ತವರು ಮನೆಗೆ ಎರಡು ದಿನಗಳ ಹಿಂದೆ ಬಂದಿದ್ದರು. ಇಂದು ತಾಯಿ ಮನೆಯ ಪಕ್ಕದಲ್ಲಿಯೇ ಇರುವ ಸಂಬಂಧಿಕರ ಮನೆಗೆ ಹೋಗುವ ಸಂದರ್ಭ ಮಗು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದಿದೆ ಎನ್ನಲಾಗಿದೆ. ಮಗುವನ್ನು ರಕ್ಷಿಸಲು ಸಂಗೀತಾ ಅವರು ಕೆರೆಗೆ ಹಾರಿದ್ದಾರೆ. ಆದರೆ ಈಜಲು ಬಾರದ ಹಿನ್ನೆಲೆಯಲ್ಲಿ ಸಂಗೀತಾ ಮಗುವನ್ನು ರಕ್ಷಿಸಲಾಗದೆ ಇತ್ತ ತನ್ನ ಪ್ರಾಣವನ್ನೂ ರಕ್ಷಿಸಿಕೊಳ್ಳಲಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸುಳ್ಯ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಸಂಗೀತಾ ಹಾಗೂ ಮಗುವಿನ ಮೃತದೇಹಗಳನ್ನು ಮೇಲೆತ್ತಲಾಗಿದ್ದು, ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.