
ಕಾಲುವೆಗೆ ಬಿದ್ದು ಸತ್ತ ಮಗ ದಿಢೀರ್ ಪ್ರತ್ಯಕ್ಷ: ಬಾಲಕನ ಪುನರ್ಜನದ ಕಥೆ ಕೇಳಿ ಎಲ್ಲರಿಗೂ ಅಚ್ಚರಿ
Friday, August 20, 2021
ನಾಗ್ಲಾ ಸಲೇಹಿ (ಉತ್ತರ ಪ್ರದೇಶ): ಪುನರ್ಜನ್ಮದ ಬಗ್ಗೆ ಎಲ್ಲರಿಗೂ ಒಂದು ರೀತಿಯ ನಂಬಿಕೆ ಇದ್ದೇ ಇದೆ. ಆದರೆ ಇಲ್ಲೊಂದು ಊಹೆಗೆ ನಿಲುಕದ ಘಟನೆಯೊಂದು ನಡೆದಿದ್ದು, ಈ ವೈಚಿತ್ರ್ಯವನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ.
ಉತ್ತರ ಪ್ರದೇಶದ ಔಚಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಸಲೇಹಿ ಗ್ರಾಮದಲ್ಲಿ ಸುಮಾರು ಎಂಟು ವರ್ಷದ ಬಾಲಕನೋರ್ವ ಇದ್ದಕ್ಕಿದ್ದಂತೆಯೇ ಮನೆಯೊಂದಕ್ಕೆ
ಹೊಕ್ಕಿ, ಮನೆಯಾಕೆಯನ್ನು ಅಮ್ಮಾ ಎಂದು ಕರೆದಿದ್ದಾನೆ. ಆಗ ಮನೆಯ ಪ್ರಮೋದ್ ಕುಮಾರ್ ದಂಪತಿ ಹೊರಕ್ಕೆ ಬಂದಾಗ ಬಾಲಕ ಅವರನ್ನು ಅಪ್ಪಾ, ಅಮ್ಮಾ… ಎಂದು ಕರೆದಿದ್ದಾನೆ. ಆ ಬಾಲಕ ಈ ರೀತಿ ಕರೆಯುತ್ತಿದ್ದುದನ್ನು ನೋಡಿದ ದಂಪತಿಗೆ ತೀರಾ ವಿಚಿತ್ರ ಎನಿಸಿದೆ. ಆದರೆ ಆ ಬಾಲಕ "ತಾನು 2013ರಲ್ಲಿ 13ನೇ ವಯಸ್ಸಿಗೆ ಕಾಲುವೆಗೆ ಬಿದ್ದು ಮೃತಪಟ್ಟಿರುವ ನಿಮ್ಮ ಮಗ ರೋಹಿತ್" ಎಂದಿರುವುದು ದಂಪತಿಗೆ ಇನ್ನಷ್ಟು ಗೊಂದಲವಾಗಿ ಕಂಡಿದೆ. ಯಾರೋ ಬೇಕಂತಲೇ ತಮ್ಮ ಸತ್ತುಹೋದ ಮಗನ ವಿಷಯವನ್ನು ಈ ಬಾಲಕನಿಗೆ ತಿಳಿಸಿ ತಮ್ಮನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಿಸಿದೆ. ಆದರೂ ಆ ಅಮ್ಮನಿಗೆ ಮಾತ್ರ ಈ ಕಂದನನ್ನು ನೋಡಿ ಕರುಳು ಚುರುಕ್ ಎಂದಿದೆ. ಹೋಗಿ ಅಪ್ಪಿಕೊಂಡು ಬಿಟ್ಟಿದ್ದಾರೆ.
ಬಳಿಕ ಆತನ ಬಗ್ಗೆ ವಿಚಾರಿಸಿದಾಗ, ತಿಳಿದದ್ದು ಇಷ್ಟೇ. ಅಮ್ಮ-ಅಮ್ಮ ಎಂದು ಕರೆದುಕೊಂಡು ಬಂದಿರುವ ಎಂಟು ವರ್ಷದ ಬಾಲಕನ ಹೆಸರು ಕರ್ಮವೀರ. ಆತ ರಾಮನರೇಶ್ ಎಂಬುವವರ ಮಗ. ಆತನಿಗೆ ಬುದ್ಧಿ ತಿಳಿಯುತ್ತಿದ್ದಂತೆ "ತನ್ನ ಮನೆ ಅಲ್ಲಿದೆ, ನನ್ನ ಅಪ್ಪ-ಅಮ್ಮ ಅವರು, ಕೆರೆಯಲ್ಲಿ ಮುಳುಗಿ ಅಚಾನಕ್ ಆಗಿ ಸತ್ತಿದ್ದೆ" ಎಂದೆಲ್ಲಾ ಬಡಬಡಿಸುತ್ತಿದ್ದ. ಆತ ಹೇಳುತ್ತಿರುವ ಮಾತು ಕೇಳಿ ದಿಗಿಲುಗೊಂಡ ತಂದೆ ರಾಮ್ ನರೇಶ್ ಪರೀಕ್ಷೆ ಮಾಡಿಯೇ ಬಿಡೋಣ ಎಂದು ಬಾಲಕ ಹೇಳಿರುವ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ.
ಇಷ್ಟು ಹೇಳುತ್ತಿದ್ದಂತೆಯೇ ಪ್ರಮೋದ್ ದಂಪತಿಗೆ ಅಚ್ಚರಿಯಾಗಿ ಹೋಗಿದೆ. ಬಾಲಕನ ಈಗಿನ ತಂದೆ ರಾಮನರೇಶ್ ಕೂಡ ಅಲ್ಲಿಗೆ ಬಂದಿದ್ದರು. ಈ ಬಾಲಕನ ಕಥೆ ಕೇಳಲು ಗ್ರಾಮಸ್ಥರು ಗುಂಪುಗೂಡಿದ್ದರು. ಇಷ್ಟೇ ಅಲ್ಲದೇ, ಬಾಲಕ ತಾನು ಹಿಂದಿನ ಜನ್ಮದಲ್ಲಿ ಕಲಿತ ಶಾಲೆ ಹಾಗೂ ಅಲ್ಲಿಯ ಮುಖ್ಯೋಪಾಧ್ಯಾಯ ಸುಭಾಷ್ ಯಾದವ್ ಅವರ ಮನೆಗೂ ಕರೆದುಕೊಂಡು ಹೋಗಿ ತಾನು ಹಿಂದೆ ಮಾಡುತ್ತಿದ್ದ ಎಲ್ಲಾ ವಿಷಯ ತಿಳಿಸಿದ್ದಾನೆ. ಸದ್ಯ ಈ ಬಾಲಕನ ವಿಚಾರ ವಿಜ್ಞಾನಕ್ಕೆ ದೊಡ್ಡ ಸವಾಲಾಗಿರುವುದಂತೂ ಸತ್ಯ.