ಪ್ರೇಮಿಸಿ ಮದುವೆಯಾದ ರಿಯಾಲಿಟಿ ಶೋ ಕಲಾವಿದನನ್ನು ಬಿಟ್ಟು ಬೇರೆಯವನನ್ನು ವರಿಸಿದ ಯುವತಿ... ಕೈಯಲ್ಲಿ ಕಾಸಿಲ್ಲ ಎನ್ನುವುದು ಕಾರಣ!
Tuesday, August 24, 2021
ಮಂಡ್ಯ: ಕನ್ನಡದ ರಿಯಾಲಿಟಿ ಶೋನಲ್ಲಿ ಗುರುತಿಸಿಕೊಂಡಿದ್ದ ಕಲಾವಿದನೋರ್ವನು ತಾನು ಪ್ರೀತಿಸಿ ಮದುವೆಯಾಗಿರುವ ಪತ್ನಿಯ ವಿರುದ್ಧವೇ ಠಾಣೆಯ ಮೆಟ್ಟಿಲೇರಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತನ್ನನ್ನು ಪ್ರೀತಿಸಿ ಮದುವೆಯಾಗಿದ್ದಾಕೆ ಸಂಸಾರ ಮಾಡಿ, ಕೈಕೊಟ್ಟು ಬೇರೊಂದು ಮದುವೆಯಾಗಿದ್ದಾಳೆಂದು ಅವರು ಆರೋಪಿಸಿದ್ದಾರೆ.
ಕಲರ್ಸ್ ಕನ್ನಡದ ಮಜಾಭಾರತ ಕಾಮಿಡಿ ಶೋ ಕಲಾವಿದ ರವಿ ರಿಯಾಲಿಟಿ ಶೋ ಅಲ್ಲದೆ ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಈ ಸಮಯದಲ್ಲಿ ಮೈಸೂರು ಮೂಲದ ಬೇಬಿ ಎಂಬ ಕಲಾವಿದೆಯ ಪ್ರೀತಿಯ ಬಲೆಗೆ ಬಿದ್ದಿದ್ದರು. ಇವರ ಪ್ರೀತಿಗೆ ಕುಟುಂಬಸ್ಥರ ವಿರೋಧವಿತ್ತು. ಆದರೂ 4 ವರ್ಷಗಳ ಹಿಂದೆ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿ ಸಂಸಾರ ಆರಂಭಿಸಿದ್ದರು.
ಮದುವೆಯಾದ ಬಳಿಕ ಮೈಸೂರಿನ ಬಾಡಿಗೆ ಮನೆಯೊಂದರಲ್ಲಿ ನಾಲ್ಕು ವರ್ಷದಿಂದ ಈ ಜೋಡಿ ಸಂಸಾರ ನಡೆಸುತ್ತಿತ್ತು. ಅಲ್ಲದೆ, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ದಂಪತಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಈ ವೇಳೆ ಮದುವೆಗೆ ಗೈರಾಗಿದ್ದ ತಾಯಿಯನ್ನು ಕರೆಸಿ ಕಾರ್ಯಕ್ರಮದಲ್ಲೇ ಬೇಬಿಗೆ ಮತ್ತೊಮ್ಮೆ ರವಿ ತಾಳಿ ಕಟ್ಟಿದ್ದರು ಎನ್ನಲಾಗಿದೆ.
ಈ ನಡುವೆ ಕೊರೊನಾ ಲಾಕ್ ಡೌನ್ ನಿಂದ ರವಿ ಕೆಲಸವಿಲ್ಲದಾಯಿತು. ಇದರಿಂದ ರವಿ ಪತ್ನಿ ಬೇಬಿ ಬೇರೆಯವನೊಂದಿಗೆ ಪ್ರಣಯದಾಟ ಶುರು ಮಾಡಿದ್ದಳಂತೆ. ಈ ವಿಚಾರ ರವಿಗೆ ತಿಳಿದು, ಪ್ರಶ್ನಿಸಿದಾಗ ನಿನ್ನ ಬಳಿ ದುಡ್ಡಿಲ್ಲ. ಅದಕ್ಕೆ ನಾನು ನಿನ್ನ ಬಿಟ್ಟು ಹೋಗ್ತೀನಿ ಅಂದಿದ್ದಾಳೆ. ಅಲ್ಲದೆ, ಈಗ ಆತನನ್ನೇ ಮದುವೆಯಾಗಿದ್ದಾಳೆ ಎಂದು ರವಿ ಆರೋಪಿಸಿದ್ದಾರೆ.
ಈ ಮದುವೆಯನ್ನು ತಡೆಯಲು ಹೋದ ನನ್ನ ಮೇಲೆಯೇ ಪತ್ನಿ ಎರಡನೇ ಗಂಡ ಹಾಗೂ ಆಕೆಯ ತಮ್ಮನಿಂದ ಹಲ್ಲೆ ಮಾಡಿಸಿದ್ದಾಳೆ. ಹೀಗಾಗಿ, ತನಗಾದ ಮೋಸದಂತೆ ಮತ್ತಿನ್ನಾರಿಗೂ ಆಗಬಾರದು. ಆಕೆಗೆ ಶಿಕ್ಷೆ ಆಗಬೇಕು ಅಂತಾ ರವಿ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣದ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.