ಕಾರು ಚಲಾಯಿಸುತ್ತಿದ್ದ ವಕೀಲನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಬಿತ್ತು ಸಾವಿರ ರೂ. ದಂಡ!
Saturday, August 14, 2021
ಪಟ್ನಾ (ಬಿಹಾರ): ಬೈಕ್ ಸವಾರಿ ನಡೆಸುವಾಗ ಹೆಲ್ಮೆಟ್ ಕಡ್ಡಾಯವಾದರೆ, ಕಾರಿನಲ್ಲಿ ಹೋಗುವಾಗ ಸೀಟ್ ಬೆಲ್ಟ್ ಕಡ್ಡಾಯ ಎಂದು ಸಾರಿಗೆ ಇಲಾಖೆಯ ನಿಯಮವೇ ಇದೆ. ಇಲ್ಲದಿದ್ದಲ್ಲಿ ಖಂಡಿತಾ ದಂಡ ತೆರಬೇಕಾಗುತ್ತದೆ. ಆದರೆ ಕಾರಿನಲ್ಲಿ ಹೋಗುವಾಗ ಹೆಲ್ಮೆಟ್ ಹಾಕಿಲ್ಲ ಎನ್ನುವ ಕಾರಣಕ್ಕೆ ಟ್ರಾಫಿಕ್ ಪೊಲಿಸ್ ವಕೀಲರೊಬ್ಬರಿಗೆ ಒಂದು ಸಾವಿರ ರೂ. ದಂಡ ವಿಧಿಸಿದ್ದಾನೆ ಅಂದರೆ ನೀವು ನಂಬಲೇ ಬೇಕು.
ಅಂದಹಾಗೆ ಈ ಘಟನೆ ಬೇರಾವುದೋ ದೇಶದಲ್ಲಿ ನಡೆದಿರುವುದು ಅಲ್ಲ. ಬದಲಿಗೆ ನಮ್ಮದೇ ಬಿಹಾರ ರಾಜ್ಯದ ಪಟ್ನಾದಲ್ಲಿನ ಕಂಕರ್‌ಬಾಗ್‌ನ ಟ್ರಾಫಿಕ್ ಚೆಕ್ ಪೋಸ್ಟ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕಾರಿನಲ್ಲಿ ಹೋಗುತ್ತಿದ್ದ ವಕೀಲನನ್ನು ತಡೆದು ನಿಲ್ಲಿಸಿದ ಪೊಲೀಸ್ ಹೆಲ್ಮೆಟ್ ಹಾಕಿಲ್ಲವೆಂದು ಸಾವಿರ ರೂ.ದಂಡ ವಿಧಿದ್ದಾರೆ.
ಪಟ್ನಾ ಹೈಕೋರ್ಟ್ನ ವಕೀಲ ಪ್ರಕಾಶ್ ಚಂದ್ರ ಅಗರವಾಲ್ ಅವರಿಗೆ 1 ಸಾವಿರ ರೂ. ದಂಡ ಕಟ್ಟುವಂತೆ ರಶೀದಿ ನೀಡುತ್ತಿದ್ದಂತೆಯೇ ಅವರು ರೇಗಿ ಹೋಗಿದ್ದಾರೆ. ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ನಂತರ ಹೇಗೋ ತಡೆದು ನಿಲ್ಲಿಸಲಾಗಿದೆಯಲ್ಲ, ಏನಾದರೂ ಮಾಡಬೇಕು ಎನ್ನುವ ಕಾರಣಕ್ಕೆ ಪೊಲೀಸ್ ಕಾರಿನ ಎಲ್ಲ ದಾಖಲೆ ತಪಾಸಣೆ ನಡೆಸಿದ್ದಾನೆ. ಎಲ್ಲವೂ ಸರಿಯಾಗಿದೆ.
ಬಳಿಕ ವಕೀಲರು ಸಿಟ್ಟಿಗೆದ್ದು ಗದರಿದಾಗ ಟ್ರಾಫಿಕ್ ಪೊಲೀಸ್‌ಗೆ ಇವರು ವಕೀಲರು ಎಂದು ತಿಳಿದು ಹೆದರಿ ಒಂದು ಸಾವಿರ ರೂ. ಚಲನ್ ಕ್ಯಾನ್ಸಲ್ ಮಾಡಿದ್ದಾನೆ. ಆದರೆ ಇಲ್ಲಿಗೆ ಸುಮ್ಮನಾಗದ ವಕೀಲರು, ಸಂಚಾರಿ ವಿಭಾಗದ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ತಪ್ಪಿತಸ್ಥ ಪೊಲೀಸ್ ಟ್ರಾಫಿಕ್ ಇನ್ಸ್‌ಪೆಕ್ಟರ್ ವಿರುದ್ಧ ತನಿಖೆ ನಡೆಸಲಾಗುವುದು ಎಂದಿದ್ದಾರೆ.