
75ನೇ ಸ್ವಾತಂತ್ರ್ಯೋತ್ಸವದಂದು ಓಲಾ ಇ ಸ್ಕೂಟರ್ ಮಾರುಕಟ್ಟೆಗೆ... ಏನಿದರ ವಿಶೇಷತೆ?
Saturday, August 14, 2021
ನವದೆಹಲಿ: ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಓಲಾ ಇ ಸ್ಕೂಟರ್, 75ನೇ ಸ್ವಾತಂತ್ರ್ಯೋತ್ಸವದಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಓಲಾ ಸಂಸ್ಥೆ ಹೇಳಿಕೊಂಡಿದೆ.
ಈ ಹೊಸ ಆವೃತ್ತಿಯ ಇ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಕ್ಕೆ ತುಂಬಾ ಉತ್ಸುಕರಾಗಿದ್ದು, ಪೆಟ್ರೋಲ್ ಬೆಲೆ ಏರಿಕೆಯ ನಡುವೆ ಜನಸ್ನೇಹಿ ಸ್ಕೂಟರ್ ಬಿಡುಗಡೆಯಾಗುತ್ತಿರುವುದು ಸಂತೋಷವೆನಿಸುದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತ ಪಡಿಸಿದೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾವೇಶ್ ಅಗರ್ವಾಲ್ ಕೇವಲ 17 ಸೆಕೆಂಡ್ ಗಳ ವೀಡಿಯೊವೊಂದನ್ನು ತಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ದೇಶಾದ್ಯಂತ ದ್ವಿಚಕ್ರ ವಾಹನ ಪ್ರಿಯರ ಗಮನ ಸೆಳೆದಿತ್ತು.
ಓಲಾ ಇ ಸ್ಕೂಟರ್ ಗೆ ಈಗಾಗಲೇ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೇವಲ 499 ರೂ.ಗಳಿಂದ ಬುಕ್ಕಿಂಗ್ ಆರಂಭಿಸಲಾಗಿದೆ. ಸದ್ಯಕ್ಕೆ ಸಂಸ್ಥೆ ಸ್ಕೂಟರ್ ನ ನಿಗದಿತ ಬೆಲೆಯನ್ನು ಬಹಿರಂಗ ಪಡಿಸಿಲ್ಲ. ಮಾರುಕಟ್ಟೆಯ ತಜ್ಞರ ಪ್ರಕಾರ ಸ್ಕೂಟರ್ ನ ಬೆಲೆ ಅಂದಾಜು 80-85 ಸಾವಿರ ರೂ. ಆಗಿರಬಹುದು ಎಂದು ಹೇಳಲಾಗುತ್ತಿದೆ. ಓಲಾ ಸ್ಕೂಟರ್ ಮೇಲೆ ಸಬ್ಸಿಡಿಯನ್ನೂ ನೀಡಲಿದೆ. ಆದರೆ, ಅಂದಾಜು ಬೆಲೆ ಸಬ್ಸಿಡಿಯೊಂದಿಗೆ ಇರುತ್ತದೆಯೇ ಅಥವಾ ಸಬ್ಸಿಡಿಯನ್ನು ಈ ಬೆಲೆಯಲ್ಲಿ ಮಾತ್ರ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿ ಇನ್ನೂ ತಿಳಿದಿಲ್ಲ.
ಓಲಾ ಇ-ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ 150 ಕಿ.ಮೀ. ವರಗೆ ಚಲಿಸಬಹುದು. ಹೋಮ್ ಚಾರ್ಜರ್‌ನೊಂದಿಗೆ ಸ್ಕೂಟರ್ ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಮನೆಯಲ್ಲಿ ಅಳವಡಿಸಲಾಗಿರುವ ಸಾಮಾನ್ಯ ಸಾಕೆಟ್ ನಿಂದಲೇ ಸ್ಕೂಟರ್ ನನ್ನು ಚಾರ್ಜ್ ಮಾಡಬಹುದಾಗಿದೆ.
ಗರಿಷ್ಠ ವೇಗ ಗಂಟೆಗೆ 90 ಕಿಮೀ ಇರಲಿದೆ. 18 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಸ್ಮಾರ್ಟ್ ಫೋನ್ ಸಂಪರ್ಕವು ಓಲಾ ಇಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಲಭ್ಯ. ದೇಶದ 400 ಪ್ರಮುಖ ನಗರಗಳಲ್ಲಿ 1,00,000 ಸ್ಥಳಗಳಲ್ಲಿ ಅಥವಾ ಟಚ್ ಪಾಯಿಂಟ್ ಗಳಲ್ಲಿ ಹೈಪರ್ ಚಾರ್ಜರ್ ಕೇಂದ್ರವನ್ನು ಸ್ಥಾಪಿಸಲಿದ್ದು, ಮಾಹಿತಿಯು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ ಎಂದು ಕೂಡ ಸಂಸ್ಥೆ ಮಾಹಿತಿ ನೀಡಿದೆ.