ಪತ್ನಿಯ ಜತೆಗಿನ ಸಂಭೋಗ ಬಲವಂತದಿಂದಾದರೂ, ಒಪ್ಪಿಗೆಯಿಂದಾದರೂ ಅಪರಾಧವಲ್ಲ: ಛತ್ತೀಸ್ಗಢ ಹೈಕೋರ್ಟ್
Thursday, August 26, 2021
ರಾಯ್ಪುರ(ಛತ್ತೀಸ್ಗಢ): ವೈವಾಹಿಕ ಜೀವನದಲ್ಲಿ ಪತ್ನಿ ಮೇಲೆ ನಡೆಸುವ ಅತ್ಯಾಚಾರವು ಭಾರತೀಯ ಕಾನೂನಿನಲ್ಲಿ ಅಪರಾಧವೆಂದು ಪರಿಗಣಿಸಲಾಗಿಲ್ಲ. ಪತ್ನಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯು ಬಲವಂತದಿಂದಾದರೂ ಅಥವಾ ಆಕೆ ಒಪ್ಪಿಗೆಯಿದ್ದರೂ ಅದು ಅಪರಾಧವಲ್ಲ ಎಂದು ಛತ್ತೀಸ್ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭಾರತೀಯ ದಂಡ ಸಂಹಿತೆ(ಐಪಿಸಿ ಸೆಕ್ಷನ್ 375ರ ಪ್ರಕಾರ, ಅತ್ಯಾಚಾರವು ಅಪರಾಧ) 2ನೇ ಭಾಗವು ಪತಿಯು ತನ್ನ ಪತ್ನಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆ ಅಪರಾಧವಲ್ಲ. ಈ ನಿಯಮವು ತನ್ನ ಸ್ವಂತ ಪತ್ನಿಯೊಂದಿಗೆ(ಅಪ್ರಾಪ್ತಳಲ್ಲದ) ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂದು ನ್ಯಾಯಮೂರ್ತಿ ಎನ್.ಕೆ. ಚಂದ್ರವಂಶಿ ಹೇಳಿದ್ದಾರೆ.
ಮಹಿಳೆಯೊಬ್ಬಳು, ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಪತಿ ವಿರುದ್ಧ ಸೆಕ್ಷನ್ 376(ಅತ್ಯಾಚಾರ) ದಡಿ ಹಲವು ಆರೋಪಗಳನ್ನು ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಆದರೂ, ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಹಿಳೆ ಸೆಕ್ಷನ್ 498 ಎ (ಮಹಿಳೆಯರಿಗೆ ಕ್ರೌರ್ಯಕ್ಕೆ ಸಂಬಂಧಿಸಿ), 377 (ಅಸಹಜ ಸಂಭೋಗ)ದಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಮದುವೆಯಾದ ಕೆಲ ದಿನಗಳ ಬಳಿಕ ಪತಿಯ ಕುಟುಂಬಸ್ಥರು ಕ್ರೌರ್ಯ, ನಿಂದನೆ ಮತ್ತು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯು ಆರೋಪಿಸಿದ್ದಾಳೆ. ಅಲ್ಲದೆ, ಪತಿ ಸಂಭೋಗದ ವೇಳೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಆತ ತನ್ನ ಯೋನಿಯಲ್ಲಿ ಇತರೆ ವಸ್ತುಗಳನ್ನು ತೂರಿಸಿ ವಿಕೃತತೆ ಮರೆಯುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ವ್ಯಕ್ತಿಯ ದುರ್ವರ್ತನೆಯು ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಸಂಬಂಧ ನ್ಯಾಯಾಲಯವು ಸಂತ್ರಸ್ತೆಯಿಂದ ಲಿಖಿತ ಹೇಳಿಕೆ ಪಡೆದಿದೆ.
ಇತ್ತೀಚೆಗಷ್ಟೇ, ವೈವಾಹಿಕ ಅತ್ಯಾಚಾರವು ಭಾರತೀಯ ಕಾನೂನಿನ ಪ್ರಕಾರ ಕ್ರಿಮಿನಲ್ ಅಪರಾಧವಲ್ಲ, ಅದು ಕ್ರೌರ್ಯಕ್ಕೆ ಸಮಾನವಾಗಿದ್ದು. ಹೆಂಡತಿ ವಿಚ್ಛೇದನಕ್ಕೆ ಅರ್ಹಳು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.