ದಾರಿ ಕೇಳುವ ನೆಪದಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ್ದೇನು ಗೊತ್ತೇ?
Tuesday, August 3, 2021
ಗುವಾಹಟಿ (ಅಸ್ಸಾಂ): ದಾರಿ ಕೇಳುವ ನೆಪದಲ್ಲಿ ಮೈಮೇಲೆ ಕೈಹಾಕಿ ಕಿರುಕುಳ ನೀಡಿರುವ ವ್ಯಕ್ತಿಯ ಸ್ಕೂಟರ್ ಅನ್ನು ಚರಂಡಿಗೆ ದೂಡಿ, ಆತನ ಕೃತ್ಯವನ್ನು ಯುವತಿಯೋರ್ವಳು ಪ್ರತಿಭಟಿಸಿದ ಘಟನೆ ಅಸ್ಸಾಂ ರಾಜ್ಯದ ಗುವಾಹಟಿ ಎಂಬಲ್ಲಿನ ಜನನಿಬಿಡ ಪ್ರದೇಶದಲ್ಲಿ ನಡೆದಿದೆ. ಭಾವನಾ ಕಶ್ಯಪ್ ಎಂಬ ಮಹಿಳೆ ಈ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾಳೆ.
ಆಕೆ ಈ ವೀಡಿಯೋ ಹಾಕಿ 'ಆರೋಪಿ ತನ್ನ ಬಳಿ ಬಂದು ದಾರಿ ಕೇಳಿದ, ನಾನು ಗೊತ್ತಿಲ್ಲ ಎಂದೆ. ತಕ್ಷಣ ಆತ ನನ್ನ ಹತ್ತಿರ ಬಂದು ಖಾಸಗಿ ಭಾಗಗಳನ್ನು ಮುಟ್ಟಲು ಪ್ರಯತ್ನಿಸಿದ. ಅಲ್ಲದೇ, ನನ್ನ ದೇಹದ ಮೇಲೆ ಕೈ ಹಾಕಿ ಲೈಂಗಿಕವಾಗಿ ದಾಳಿ ಮಾಡಲು ಮುಂದಾಗಿದ್ದಾನೆ. ಇದರಿಂದ ಅರೆಕ್ಷಣ ನನಗೆ ಏನು ಮಾಡಬೇಕು ಎಂದು ತೋಚದೆ ವಿಚಲಿತಳಾದೆ' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾಳೆ.
ಈ ಕಾರ್ಯವನ್ನು ಪ್ರತಿಭಟಿಸಲು ಆಕೆ ಆತನ ಸ್ಕೂಟರ್ ಅನ್ನು ಚರಂಡಿಗೆ ದೂಡಿ ಹಾಕಿದ್ದಾಳೆ. ಆರೋಪಿ ತಕ್ಷಣ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ, ಆದರೆ, ನಾನು ಬಿಡಲಿಲ್ಲ. ಆತನ ಸ್ಕೂಟರ್ ಅನ್ನು ಎಳೆದು ಹಿಡಿದೆ. ಅಷ್ಟೊತ್ತಿಗೆ ಸ್ಥಳೀಯರು ನನ್ನ ಸಹಾಯಕ್ಕೆ ಬಂದರು. ಆರೋಪಿ ನನ್ನ ಬಳಿ ಸ್ಕೂಟರ್ ಮೇಲೆತ್ತಿ ಕೊಡುವಂತೆ ಕೇಳಿಕೊಂಡ ಎಂದು ಬರೆದುಕೊಂಡಿದ್ದಾರೆ.
ಆತನ ಹೆಸರು ಮದುಸಾನ ರಾಜ್ಕುಮಾರ್ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ದ ಗುವಾಹಟಿಯ ರುಕ್ಮಿಣಿ ನಗರದ ಡಿಸ್ಪೂರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.