ಸ್ಯಾಮ್ ಸಂಗ್ ಗೆಲಾಕ್ಸಿ ಎ22 5ಜಿ ನೂತನ ಫೋನ್ ಲಾಂಚ್
Thursday, August 5, 2021
ನವದೆಹಲಿ: ಸ್ಯಾಮ್ ಸಂಗ್ ಸಂಸ್ಥೆ ಗೆಲಾಕ್ಸಿ ಎ22 ಎಂಬ ಫೋನ್ ಬಿಡುಗಡೆ ಮಾಡಿತ್ತು. ಅದು ಲಾಂಚ್ ಕೆಲವೇ ದಿನಗಳಲ್ಲಿ ಗೆಲಾಕ್ಸಿ ಎ22 5ಜಿಯನ್ನು ಹೊರತಂದಿದೆ. ಭಾರತದಲ್ಲಿ ಇದು ಎರಡು ಆವೃತ್ತಿಗಳಲ್ಲಿ ದೊರಕುತ್ತಿದೆ. ಒಂದು 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹಾಗೂ ಇನ್ನೊಂದು 8 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ. ದರ ಕ್ರಮವಾಗಿ 19,999 ರೂ. ಹಾಗೂ 21,999 ರೂ. ಇರಲಿದೆ.
20 ಸಾವಿರ ರೂ. ಒಳಗಿನ ಮೊಬೈಲ್ ಫೋನ್‍ಗಳ ವಿನ್ಯಾಸಕ್ಕೆ ಹೋಲಿಸಿದಾಗ ಇದರ ಹೊರ ಮೇಲ್ಮೈ ಅತೀವ ಗಮನ ಸೆಳೆಯುತ್ತದೆ. ಫೋನಿನ ಫ್ರೇಂ ಲೋಹದ್ದಾಗಿದ್ದು, 9 ಮಿ.ಮೀ. ನಷ್ಟು ಸ್ಲಿಮ್ ಆಗಿದೆ. ಹಿಂಬದಿ ವಿನ್ಯಾಸ ಪ್ಲಾಸ್ಟಿಕ್ ಆದರೂ ಮಾಮೂಲಿ ಪ್ಲಾಸ್ಟಿಕ್‍ನಂತಿಲ್ಲದೇ ವಿಶಿಷ್ಟವಾಗಿದೆ. ಹಿಂಬದಿ ಎಡ ಮೂಲೆಯಲ್ಲಿ ಮೂರು ಲೆನ್ಸ್ ಹಾಗೂ ಒಂದು ಫ್ಲಾಶ್ ಇರುವ ಚಚ್ಚೌಕದ ಡಿಸೈನ್ ಮಾಡಲಾಗಿದೆ. ಒಟ್ಟಾರೆ ಫೋನಿನ ಡಿಸೈನ್ ಪ್ರೀಮಿಯಂ ಆಗಿದೆ.
ಈ ಫೋನ್ ನಲ್ಲಿ 6.6 ಇಂಚಿನ ಎಲ್‍ಸಿಡಿ ಡಿಸ್ ಪ್ಲೇಯನ್ನು ನೀಡಲಾಗಿದ್ದು, ಸಾಮಾನ್ಯವಾಗಿ ಸ್ಯಾಮ್‍ಸಂಗ್ ಮೊಬೈಲ್‍ಗಳು ಅಮೋಲೆಡ್ ಡಿಸ್‍ಪ್ಲೇಗೆ ಪ್ರಸಿದ್ಧ. ಈ ಫೋನಿನಲ್ಲಿ ಅಮೋಲೆಡ್ ಇರದಿರುವುದು ಅಚ್ಚರಿಯ ಅಂಶ. ಮಧ್ಯದಲ್ಲಿ ಸೆಲ್ಫೀ ಕ್ಯಾಮರಾಕ್ಕೆ ಜಾಗ ಬಿಡಲು ವಾಟರ್ ಡ್ರಾಪ್ ವಿನ್ಯಾಸ ಮಾಡಲಾಗಿದೆ. ಫುಲ್ ಎಚ್‍ಡಿ ಪ್ಲಸ್ ಡಿಸ್‍ಪ್ಲೇ ಇದ್ದು, 90 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಅಮೋಲೆಡ್ ಇಲ್ಲದಿದ್ದರೂ ಡಿಸ್‍ಪ್ಲೇ ಗುಣಮಟ್ಟ ಚೆನ್ನಾಗಿದೆ. ಅಮೋಲೆಡ್ ಇದ್ದರೆ ಸೂಪರ್ ಆಗಿರುತ್ತಿತ್ತು.
ಇದರಲ್ಲಿರುವುದು ಮೀಡಿಯಾಟೆಕ್ ಡೈಮೆನ್ಸಿಟಿ 700 5ಜಿ (7ಎನ್ ಎಂ) ಪ್ರೊಸೆಸರ್. ಆಂಡ್ರಾಯ್ಡ್ 11 ಓಎಸ್ ಹೊಂದಿದ್ದು, ಇದಕ್ಕೆ ಸ್ಯಾಮ್‌ಸಂಗ್ ನ ಒನ್ ಯೂಐ 3.1 ಅನ್ನು ಮಿಶ್ರಣ ಮಾಡಲಾಗಿದೆ. ಡೈಮೆನ್ಸಿಟಿ 700 ಪ್ರೊಸೆಸರ್ ಮೇಲ್ಮಧ್ಯಮ ವರ್ಗದ ಮೊಬೈಲ್‍ಗಳಲ್ಲಿ ವೇಗದ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಯಾವುದೇ ಲ್ಯಾಗ್ ಅನುಭವಕ್ಕೆ ಬರಲಿಲ್ಲ. ವಿಶೇಷವೆಂದರೆ, ಈ ಮೊಬೈಲ್‍ಗೆ 2 ವರ್ಷಗಳ ಕಾಲ ಗ್ಯಾರಂಟಿಯಾಗಿ ಸಾಫ್ಟ್ ವೇರ್ ಅಪ್‍ಡೇಟ್ ನೀಡುವುದಾಗಿ ಸ್ಯಾಮ್‍ಗಂಗ್ ತಿಳಿಸಿದೆ.
48 ಮೆಗಾಪಿಕ್ಸಲ್ ಮುಖ್ಯ ಕ್ಯಾಮರಾ, ಅದಕ್ಕೆ 5 ಮೆಪಿ ವೈಡ್ ಲೆನ್ಸ್ ಹಾಗೂ 2 ಮೆ.ಪಿ. ಡೆಪ್ತ್ ಲೆನ್ಸ್ ಅಳವಡಿಸಲಾಗಿದೆ ಸೆಲ್ಫೀಗೆ 8 ಮೆ.ಪಿ. ಕ್ಯಾಮರಾ ಇದೆ. ಹಿಂಬದಿ ಕ್ಯಾಮರಾ ಗುಣಮಟ್ಟ ತೃಪ್ತಿದಾಯಕ. ವೈಡ್ ಆಂಗಲ್ ಲೆನ್ಸ್ ಕಿರಿದಾದ ಜಾಗದಲ್ಲಿ ನಿಂತು ಎದುರಿನ ಫೋಟೋ ಫೋಕಸ್ ಮಾಡಿ ಫೋಟೋಗ್ರಫಿ ಮಾಡಲು ಅನುಕೂಲಕರವಾಗಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಇಲ್ಲ. ಮ್ಯಾಕ್ರೋ ಲೆನ್ಸ್ ಹೊಂದಿಲ್ಲ. ಮುಂಬದಿ ಇರುವ 8 ಮೆ.ಪಿ. ಕ್ಯಾಮರಾದ ಗುಣಮಟ್ಟ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. 20 ಸಾವಿರಕ್ಕೆ 5ಜಿ ಸೌಲಭ್ಯ ನೀಡುವ ಸಲುವಾಗಿ ರೂಪಿಸಿರುವುದರಿಂದ ಕ್ಯಾಮರಾ ವಿಭಾಗದಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. 5ಜಿ ಸೌಲಭ್ಯ ನೀಡುವುದಕ್ಕಾಗಿ ಈ ಮಾದರಿಯಲ್ಲಿ ದರ ಹೆಚ್ಚಳವಾಗದಂತೆ ನೋಡಿಕೊಳ್ಳಲು ಕ್ಯಾಮರಾ, ಡಿಸ್‍ಪ್ಲೇ (ಅಮೋಲೆಡ್ ಇಲ್ಲದ), ವೇಗದ ಚಾರ್ಜಿಂಗ್ ನಂಥ ಅಂಶಗಳಿಗೆ ಸ್ವಲ್ಪ ಕಡಿಮೆ ಒತ್ತು ನೀಡಲಾಗಿದೆ. ಆದರೂ ನೀಡುವ ದರಕ್ಕೆ ಮೌಲ್ಯ ನೀಡುತ್ತದೆ.