ಮಂಗಳೂರಿನಲ್ಲೊಬ್ಬ ವಿಚಿತ್ರ ಮನುಷ್ಯ: ಈತ ತಿಂತಾನೆ ಹಸಿಹಸಿ ಮೀನು Video
Tuesday, July 27, 2021
ಮಂಗಳೂರು: ಸ್ನೇಹಿತರು ಮಾಡಿರುವ ಚಾಲೆಂಜ್ ಗಾಗಿ ಯುವಕನೋರ್ವನು ಅಸಹ್ಯಪಡದೆ ಕ್ಷಣಾರ್ಧದಲ್ಲಿ ಹಸಿ ಮೀನನ್ನೇ ತಿಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ. ಇದರ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದೀಗ ಆತನಿಗೆ ಹಸಿ ಮೀನು ತಿಂದ ಅನುಭವ ಕೇಳಲು ಜನರು ಕರೆಯ ಮೇಲೆ ಕರೆ ಮಾಡುತ್ತಿದ್ದಾರಂತೆ.
ಮಂಗಳೂರು ನಗರದ ಕೂಳೂರು ಸಮೀಪದ ಪಂಜಿಮೊಗರು ನಿವಾಸಿ ಹರೀಶ್ ಎಂಬ ಯುವಕನೇ ಹಸಿ ಬಂಗುಡೆ ಮೀನು ತಿಂದಾತ. ಜುಲೈ 25ರಂದು ಭಾನುವಾರ ಮಧ್ಯಾಹ್ನ ಸುಮಾರಿಗೆ ಗೆಳೆಯರೊಂದಿಗೆ ಮಾತನಾಡುತ್ತಾ ಇರುವಾಗ ಅವರಿಂದ ಹಸಿ ಮೀನು ತಿನ್ನುವ ಚಾಲೆಂಜ್ ಹರೀಶ್ ಗೆ ಎದುರಾಗಿತ್ತು. ಇದಕ್ಕೆ ಒಪ್ಪಿದ ಹರೀಶ್, ತಕ್ಷಣ ಒಂದು ಮಧ್ಯಮ ಗಾತ್ರದ ಹಸಿಹಸಿ ಬಂಗುಡೆ ಮೀನನ್ನು ಬಾಲದ ಬದಿಯಿಂದ ಆರಂಭಿಸಿ, ತಲೆಯವರೆಗೆ ಏನನ್ನೂ ಬಿಸಾಡದೆ ಕ್ಷಣಾರ್ಧದಲ್ಲಿ ತಿಂದು ಮುಗಿಸಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ ಮೀನನ್ನು ಅಸಹ್ಯಪಡದೆ ತಿಂದಿರುವ ಹರೀಶ್, ಇಡೀ ಮೀನನ್ನು ಅದರ ಹೊಟ್ಟೆಯೊಳಗಿನ ತ್ಯಾಜ್ಯದ ಸಹಿತ ತಿಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.
ಇದೀಗ ಈ ವೀಡಿಯೋ ವೈರಲ್ ಆಗುತ್ತಿದ್ದು, ಎಫ್ ಬಿಯಲ್ಲಿ ಎರಡು ದಿನಗಳಲ್ಲಿ 19 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅದೇ ರೀತಿ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿಯೂ ವೀಡಿಯೋ ಶೇರ್ ಆಗುತ್ತಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ, ಹರೀಶ್ ಗೆ ಜನರು ಕರೆಯ ಮೇಲೆ ಕರೆ ಮಾಡಿ ಹಸಿ ಮೀನು ತಿಂದಿರುವ ಅಭಿಪ್ರಾಯ ಕೇಳುತ್ತಿದ್ದಾರಂತೆ. ಕೆಲವರು 'ನೀವು ಹಸಿ ಮೀನು ತಿನ್ನುವ ವೀಡಿಯೋ ನೋಡಿ ನಮ್ಮಲ್ಲಿ ಕೆಲವರು ವಾಂತಿ ಮಾಡಿದ್ದಾರೆಂದು' ಹೇಳಿದವರೂ ಇದ್ದಾರಂತೆ.
ಕೆಲವರು ಈ ವೀಡಿಯೋ ನೋಡಿ ಆತ ಮದ್ಯಸೇವನಿ, ಗಾಂಜಾ ಸೇವನೆ ಮಾಡಿ ಹಸಿ ಮೀನು ತಿಂದಿದ್ದಾನೆ ಎಂದು ಹೇಳುತ್ತಿದ್ದಾರಂತೆ. ಆದರೆ ಹರೀಶ್ ಶ್ರೀಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನಾ ಶಿಬಿರ ಸೇರಿ ಮದ್ಯಸೇವನೆಯನ್ನು ನಿಲ್ಲಿಸಿಯೇ 12 ವರ್ಷ ಆಗಿದೆಯಂತೆ. ಅಲ್ಲದೆ ಅವರು ಮಂಗಳೂರು ಸುತ್ತಮುತ್ತಲಿನ ಸುಮಾರು 45-50 ಮಂದಿಯನ್ನು ಮದ್ಯವರ್ಜನಾ ಶಿಬಿರಕ್ಕೆ ಸೇರಿಸಿ ಅವರೂ ಮದ್ಯ ತೊರೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊಸ ಬದುಕು ಆರಂಭಿಸಲು ನೆರವಾಗಿದ್ದಾರಂತೆ. ಅವರ ಈ ಕಾರ್ಯಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 'ಜಾಗೃತಿ ಅಣ್ಣ' ಎಂಬ ಅವಾರ್ಡ್ ಕೂಡಾ ದೊರಕಿದೆಯಂತೆ. ಒಟ್ಟಿನಲ್ಲಿ ಚಾಲೆಂಜ್ ಗಾಗಿ ತಿಂದ ಹಸಿ ಬಂಗುಡೆ ಮೀನಿನಿಂದ ಹರೀಶ್ ರಾತ್ರೋರಾತ್ರಿ ಎಲ್ಲಡೆ ಸುದ್ದಿಯಾಗಿರೋದಂತೂ ಸುಳ್ಳಲ್ಲ.