ಮದುವೆಗೆ ಒಪ್ಪಲಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಯುವ ಜೋಡಿ..!! ಮುಂದಾಗಿದ್ದು ದುರಂತ...
Sunday, July 4, 2021
ಲಿಂಗಂಪೇಟೆ(ಯೆಲ್ಲಾರೆಡ್ಡಿ): ಹಿರಿಯರು ಮದುವೆಗೆ ಒಪ್ಪಲಿಲ್ಲ ಎಂದು ಯುವಜೋಡಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಲಿಂಗಂಪೇಟೆಯಲ್ಲಿ ನಡೆದಿದೆ.
ಮಾಧವಿ 10ನೇ ತರಗತಿ ಪೂರ್ಣಗೊಳಿಸಿ ಮನೆಯಲ್ಲಿ ಉಳಿದಿದ್ದಳು. ರಾಜು 10ನೇ ತರಗತಿಯನ್ನು ಮುಗಿಸಿ ಕೆಲಸಕ್ಕಾಗಿ ದುಬೈಗೆ ಹೋಗಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ. ಕರೊನಾ ಮೊದಲ ಅಲೆಯ ಲಾಕ್ಡೌನ್ ವೇಳೆ ಊರಿಗೆ ಹಿಂತಿರುಗಿದ್ದ. ಇಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮದುವೆಗೆ ಹಿರಿಯರು ಒಪ್ಪಿರಲಿಲ್ಲ. ಇದರಿಂದ ಬೇಸರಗೊಂಡ ಇವರು ಹೊರವಲಯದ ಜಮೀನಿಗೆ ತೆರಳಿ ಇಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಚಾರ ತಿಳಿದು ಕುಟುಂಬಸ್ಥರು ಜಮೀನಿಗೆ ಓಡಿ ಹೋಗಿದ್ದಾರೆ. ಈ ವೇಳೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಿಸದೇ ಮಾಧವಿ ಮೃತಪಟ್ಟರೆ, ರಾಜು ಸ್ಥಿತಿ ಗಂಭೀರವಾಗಿದೆ. ಸದ್ಯ ಯುವತಿ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.