![ನಕಲಿಫೇಸ್ ಬುಕ್ ಖಾತೆಯಿಂದಾಗಿ ನವಜಾತ ಶಿಶು ಸೇರಿ ಮೂವರ ಪ್ರಾಣಕ್ಕಾಯಿತು ಕುತ್ತು! ಹಾಗಾದರೆ ಆಗಿದ್ದೇನು? ನಕಲಿಫೇಸ್ ಬುಕ್ ಖಾತೆಯಿಂದಾಗಿ ನವಜಾತ ಶಿಶು ಸೇರಿ ಮೂವರ ಪ್ರಾಣಕ್ಕಾಯಿತು ಕುತ್ತು! ಹಾಗಾದರೆ ಆಗಿದ್ದೇನು?](https://blogger.googleusercontent.com/img/b/R29vZ2xl/AVvXsEhuJPxt5grRJgv7IF3NVOD3UEE2IJwpeYwO4Hc4AB18TtNTxRgew3gujdif7S4-ckT4IT50Wrf7KMfaleOBsMVzWR1-rDEk1-e8w46RHzCT0jvbB3ASQQklcrwNKNgj0gdVwNo3F-78e9A/s1600/1625415235675725-0.png)
ನಕಲಿಫೇಸ್ ಬುಕ್ ಖಾತೆಯಿಂದಾಗಿ ನವಜಾತ ಶಿಶು ಸೇರಿ ಮೂವರ ಪ್ರಾಣಕ್ಕಾಯಿತು ಕುತ್ತು! ಹಾಗಾದರೆ ಆಗಿದ್ದೇನು?
Sunday, July 4, 2021
ಕೊಲ್ಲಂ: ತಮಾಷೆ ಮಾಡಲೆಂದು ಫೇಸ್ಬುಕ್ನಲ್ಲಿ ತೆರೆದ ನಕಲಿ ಐಡಿಯಿಂದಾಗಿ ನವಜಾತ ಶಿಶು ಸೇರಿದಂತೆ ಮೂವರ ಪ್ರಾಣಕ್ಕೇ ಕುತ್ತು ಉಂಟಾಗಿರುವ ಆತಂಕಕಾರಿ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕಳೆದ ಜನವರಿ 5ರಂದು ಕೊಲ್ಲಂನಲ್ಲಿ ಕಸದರಾಶಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ದುರಾದೃಷ್ಟವಶಾತ್ ಮಗು ಬದುಕುಳಿಯಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜೂನ್ 22ರಂದು ಮಗುವಿನ ತಾಯಿ ರೇಷ್ಮಾಳನ್ನು ಬಂಧಿಸಿದ್ದರು. ಮೃತ ಮಗುವಿನ ತಾಯಿ ರೇಷ್ಮಾ ಎಂಬುದು ಡಿಎನ್ಎದಿಂದಲೂ ದೃಢವಾಗಿತ್ತು. ಬಳಿಕ ಆಕೆಯು ಕೂಡ ಈ ಕೃತ್ಯ ಎಸಗಿರುವುದಾಗಿ ಒಪ್ಪಿದ್ದು, ಫೇಸ್ಬುಕ್ ನ ಗೆಳೆಯನ ಜೊತೆ ಓಡಿ ಹೋಗಲು ಮಗು ಅಡ್ಡಿಯಾಗಿತ್ತು ಅದಕ್ಕೆ ತಾನು ಕೊಲೆ ಮಾಡಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ಹೇಳಿಕೊಂಡಳು.
ಇದರ ಬೆನ್ನಲ್ಲೇ ಪೊಲೀಸರು ಆ ಫೇಸ್ಬುಕ್ ಫ್ರೆಂಡ್ ಯಾರೆಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದರು. ರೇಷ್ಮಾ ತನ್ನ ಪತಿಯ ಅತ್ತಿಗೆ ಆರ್ಯಾ ಹೆಸರಿನಲ್ಲಿ ನೋಂದಣಿಯಾಗಿದ್ದ ಸಿಮ್ ಕಾರ್ಡ್ ಬಳಸುತ್ತಿದ್ದಳು. ಇದರಿಂದ ಪೊಲೀಸರು ವಿಚಾರಣೆಗೆಂದು ಆರ್ಯಾಗೆ ಸಮನ್ಸ್ ನೀಡಿದ್ದರು. ಆದರೆ, ಆರ್ಯಾ ತನ್ನ ಸಂಬಂಧಿ ಗ್ರೀಷ್ಮಾ ಎಂಬಾಕೆಯ ಜತೆ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು. ಪರಿಣಾಮ ಈ ಪ್ರಕರಣ ಮತ್ತಷ್ಟು ಕಗ್ಗಂಟಾಯಿತು. ಇಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಅನೇಕ ಸವಾಲುಗಳನ್ನು ತಂದೊಡ್ಡಿತು. ಇಬ್ಬರ ಸಾವಿನ ಬಳಿಕ ಪೊಲೀಸರು ಆರ್ಯಾ ಮತ್ತು ರೇಷ್ಮಾಳ ಪತಿಯಂದಿರ ವಿಚಾರಣೆ ನಡೆಸಿ, ಹೇಳಿಕೆಯನ್ನು ದಾಖಲಿಸಿದರು.
ಗ್ರೀಷ್ಮಾ ಸ್ನೇಹಿತನನ್ನು ಪೊಲೀಸರು ನಡೆಸಿರುವ ವಿಚಾರಣೆಯು ಇಡೀ ಪ್ರಕರಣಕ್ಕೆ ಮಹತ್ವದ ಸುಳಿವು ನೀಡಿದೆ. ಆರ್ಯಾ ಮತ್ತು ಗ್ರೀಷ್ಮಾ, ಆನಂದಯ ಎಂಬ ಹುಡುಗನ ಹೆಸರಲ್ಲಿ ಟೈಮ್ ಪಾಸ್ಗಾಗಿ ಫೇಸ್ಬುಕ್ನಲ್ಲಿ ನಕಲಿ ಐಡಿಯನ್ನು ತೆರೆದಿದ್ದರು. ಬಳಿಕ ರೇಷ್ಮಾ ಜೊತೆಯಲ್ಲಿ ಪ್ರೀತಿಯ ಹೆಸರಲ್ಲಿ ಚಾಟಿಂಗ್ ಮಾಡಲು ಆರಂಭಿಸಿದ್ದರು. ರೇಷ್ಮಾ ಕೂಡ ತನ್ನೊಂದಿಗೆ ಚಾಟಿಂಗ್ ಮಾಡುತ್ತಿರುವುದು ಹುಡುಗನೇ ಎಂದು ನಂಬಿದ್ದಳು. ಇತ್ತ ರೇಷ್ಮಾ ಮಗುವನ್ನು ಬಿಟ್ಟು ಬರುವ ನಿರ್ಧಾರ ಮಾಡುತ್ತಾಳೆ ಎಂಬುದು ಆರ್ಯಾ ಮತ್ತು ಗ್ರೀಷ್ಮಾಗೂ ತಿಳಿದಿರಲಿಲ್ಲ. ಈ ಪ್ರಕರಣದಲ್ಲಿ ಆರ್ಯಾಗೆ ಸಮನ್ಸ್ ಬಂದಿದ್ದರಿಂದ ಇಬ್ಬರು ಬಂಧನವಾಗುತ್ತೇವೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೀಗ ಟೈಮ್ ಪಾಸ್ ಗಾಗಿ ತೆರೆದ ನಕಲಿ ಫೇಸ್ಬುಕ್ ಖಾತೆ ನವಜಾತ ಶಿಶು ಸೇರಿ ಮೂವರ ಸಾವಿಗೆ ಕಾರಣವಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಗಳ ವಿಚಾರದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಅನಾಹುತ ಸಂಭವಿಸುವುದು ನಿಶ್ಚಿತ ಎಂಬುದಕ್ಕೆ ಈ ಒಂದು ಘಟನೆಯೇ ಸಾಕ್ಷಿ.