ತಿಂಗಳ ಹಿಂದೆ ಮದುವೆಯಾದ ವೈದ್ಯ ದಂಪತಿ 'ವೈದ್ಯರ ದಿನವೇ' ದುರಂತ ಅಂತ್ಯ
Thursday, July 1, 2021
ಪುಣೆ(ಮಹಾರಾಷ್ಟ್ರ): ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಯುವ ವೈದ್ಯ ಜೋಡಿಯೊಂದು 'ವೈದ್ಯರ ದಿನ'ವೇ ಆತ್ಮಹತ್ಯೆಗೆ ಶರಣಾಗಿ ದುರಂತ ಅಂತ್ಯಗೊಂಡ ಘಟನೆ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಯುವ ವೈದ್ಯರಾದ ಅಂಕಿತಾ(26) ಹಾಗೂ ಆಕೆಯ ಪತಿ ನಿಖಿಲ್ ಶೆಂಡ್ಕರ್ (28) ಆತ್ಮಹತ್ಯೆಗೆ ಶರಣಾಗಿರುವವರು.
ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಅದು ತಾರಕ್ಕೇರಿದಾಗ ಅಂಕಿತಾ ನೇಣಿಗೆ ಶರಣಾಗಿದ್ದಾರೆ. ಇದರ ಬೆನ್ನಲ್ಲೇ ನಿಖಿಲ್ ಶೆಂಡ್ಕರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳ ಹಿಂದೆಯಷ್ಟೇ ಈ ವೈದ್ಯ ಜೋಡಿ ಮದುವೆ ಮಾಡಿಕೊಂಡಿತ್ತು.
ಇಬ್ಬರು ವನ್ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಇಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿದ್ದರು. ಬುಧವಾರ ಕೆಲಸ ಮುಗಿಸಿ ಮನೆಗೆ ಬಂದ ನಿಖಿಲ್ ಫೋನ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಪರಿಣಾಮ ಕೋಪಗೊಂಡ ಅಂಕಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಮನಸ್ತಾಪ ಉಂಟಾಗಿತ್ತಂತೆ. ಅದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ.