ರೂಮಿನೊಳಗೆ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಹೊತ್ತೊಯ್ದು ಗ್ಯಾಂಗ್ ರೇಪ್, ಕೊಲೆ.....
Friday, July 2, 2021
ಪಟನಾ: ಮನೆಯ ರೂಮಿನೊಳಗೆ ಮಲಗಿದ್ದ ಬಾಲಕಿಯನ್ನು ಕಿಟಕಿ ಮುರಿದು ಹೊತ್ತೊಯ್ದು ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಸಂಬಂಧಿಕರು ಜೂನ್ 29ರಂದು ಪಕ್ಕದ ಊರಿನಲ್ಲಿದ್ದ ಮದುವೆಗೆ ತೆರಳಿದ್ದರು. ಬಾಲಕಿ ತನ್ನ ಅಜ್ಜನೊಂದಿಗೆ ಮನೆಯಲ್ಲಿದ್ದಳು. ಬಾಲಕಿ ರೂಮಿನ ಬಾಗಿಲು ಹಾಕಿಕೊಂಡು ಒಳಗೆ ಮಲಗಿದ್ದಳು. ರಾತ್ರಿ ವೇಳೆ ಕಿಟಕಿ ಬಳಿ ಬಂದ ಐವರು ದುಷ್ಟರು, ಕಿಟಕಿಯನ್ನು ಮುರಿದು, ಬಾಲಕಿಯನ್ನು ಹೊತ್ತೊಯ್ದಿದ್ದಾರೆ. ಆಕೆಯನ್ನು ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಲಾಗಿದೆ. ಬಾಲಕಿಯ ಮೃತ ದೇಹವನ್ನು ಪೊದೆಯೊಂದರಲ್ಲಿ ಎಸೆದು ನಾಪತ್ತೆಯಾಗಿದ್ದಾರೆ.
ಮೊಮ್ಮಗಳು ರೂಮಿನಿಂದ ಹೊರಗೆ ಬಾರದಿರುವುದನ್ನು ಕಂಡು ಸ್ಥಳೀಯರಿಗೆ ತಿಳಿಸಿದ್ದಾನೆ. ಸ್ಥಳೀಯರು ಬಂದು ಕಿಟಕಿ ನೋಡಿದಾಗ, ಕಿಟಕಿ ಮುರಿದಿದ್ದು ಬಾಲಕಿ ಅಲ್ಲಿ ಇಲ್ಲದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಲಾಗಿದೆ. ಊರಿನಲ್ಲೆಲ್ಲೆ ಹುಡುಕಾಡಿದಾಗ ಪೊದೆಯಲ್ಲಿ ಬಾಲಕಿ ದೇಹ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.