
ಪೊಲೀಸ್ ತಪಾಸಣೆಗೆ ನಿಲ್ಲಿಸಿದ ಬಸ್ ಸೀಟ್ ನಡಿಯಲ್ಲಿ ಅತ್ಯಾಚಾರ ಸಂತ್ರಸ್ತ ಬಾಲಕಿ ಪತ್ತೆ!
ಸುಲ್ತಾನ್ಪುರ (ಉತ್ತರ ಪ್ರದೇಶ): ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಬಾಲಕಿಯನ್ನು ಐಷಾರಾಮಿ ಬಸ್ ನ ಸೀಟ್ ನಡಿಯಲ್ಲಿ ಕೂರಿಸಿ ಕರೆದೊಯ್ಯುತ್ತಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯಲ್ಲಿ ಪೊಲೀಸ್ ತಪಾಸಣೆ ಸಂದರ್ಭ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಾಲಕಿಯ ಮಲತಾಯಿಯ ಮಗಳು ಔಷಧಿ ಖರೀದಿಸುವ ನೆಪದಲ್ಲಿ ತನ್ನ ಮನೆಗೆ ಆಕೆಯನ್ನು ಕರೆಯಿಸಿಕೊಂಡಿದ್ದಾಳೆ. ಅಲ್ಲಿಂದ ಆಕೆಯನ್ನು ಶಿವ ಪೂಜನ್ ಸಿಂಗ್ ಎಂಬಾತನ ಮನೆಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಆಕೆಯನ್ನು ಬಸ್ ಮರಳಿ ಕರೆತರಲಾಗುತ್ತಿತ್ತು. ಈ ವೇಳೆ ತಪಾಸಣೆ ನಡೆಸುತ್ತಿದ್ದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಸಂತ್ರಸ್ತೆಯ ಸಹೋದರಿ, ಬಸ್ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಬಾಲಕಿಯನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಸುಲ್ತಾನಪುರ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ ತಿಳಿಸಿದ್ದಾರೆ.