ಮಂಗಳೂರಿನಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ರ‌್ಯಾಗಿಂಗ್- ಆರು ಮಂದಿ ಬಂಧನ (Video)
Saturday, July 17, 2021
ಮಂಗಳೂರು: ಮಂಗಳೂರಿನ ಫಳ್ನೀರ್‌ನಲ್ಲಿರುವ ಇಂದಿರಾ ಕಾಲೇಜಿನಲ್ಲಿ ರ‌್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು ಆರು ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಫಳ್ನೀರ್‌ನ ಇಂದಿರಾ ನರ್ಸಿಂಗ್ ಕಾಲೇಜಿನ ಮೂರನೇ ವಿದ್ಯಾರ್ಥಿಗಳಾದ ಶ್ರೀಲಾಲ್ (20), ಶಾಹಿದ್ (20), ಅಮ್ಜದ್ (20), ಜುರೈಜ್ (20), ಹುಸೈನ್ (20), ಲಿಮ್ಸ್ (20) ಬಂಧಿತರು.
ಜುಲೈ 14ರಂದು ರಾತ್ರಿ 8 ಗಂಟೆಗೆ ನಗರದ ಫಳ್ನೀರ್ ರಸ್ತೆಯ ಹೊಟೇಲ್‌ವೊಂದಕ್ಕೆ ಇಂದಿರಾ ನರ್ಸಿಂಗ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ಮ್ಯಾನುಯಲ್ ಬಾಬು (21) ಎಂಬವರು ಊಟಕ್ಕಾಗಿ ತೆರಳಿದ್ದ ವೇಳೆ ಇಂದಿರಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಾಲ್, ಜುರೈಜ್, ರಸೆಲ್ ಅವರ ಪೈಕಿ ಶ್ರೀಲಾಲ್ ಮ್ಯಾನುಯಲ್ ಬಾಬುವನ್ನುದ್ದೇಶಿಸಿ, ‘ಏನು ಮುಖ ನೋಡುತ್ತಿಯಾ, ನೀನು ಜೂನಿಯರ್, ನಾವು ಬರುವಾಗ ಎದ್ದು ನಿಂತು ರೆಸ್ಪೆಕ್ಟ್ ಕೊಡಬೇಕು’ ಎಂದು ರ‌್ಯಾಗಿಂಗ್ ನಡೆಸಿದ್ದಾರೆ .
ಬಳಿಕ ರಾತ್ರಿ 10:30ರ ಸುಮಾರಿಗೆ ಅತ್ತಾವರದ ಅಪಾರ್ಟ್‌ಮೆಂಟ್‌ನ ರೂಮಿನಲ್ಲಿ ಮ್ಯಾನುಯಲ್ ಬಾಬು ಇದ್ದ ಸಂದರ್ಭ ಶ್ರೀಲಾಲ್ (20), ಶಾಹಿದ್ (20), ಅಮ್ಜದ್ (20), ಜುರೈಜ್ (20), ಹುಸೈನ್ (20), ಲಿಮ್ಸ್ (20) ಎಂಬವರು ಮಾರಕಾಯುಧ ಸಹಿತ ರೂಮಿಗೆ ಆಗಮಿಸಿದ್ದಾರೆ. ಬಳಿಕ ಈ ವಿದ್ಯಾರ್ಥಿಗೆ ಬಟ್ಟೆಗಳನ್ನು ತೆಗೆದು ಒಳವಸ್ತ್ರದಲ್ಲಿ ನಿಲ್ಲಲು, ಪದೇಪದೇ ಕುಳಿತುಕೊಳ್ಳಲು, ಎದ್ದುನಿಲ್ಲಲು ಹೇಳಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ. ಅಲ್ಲದೆ, ಆರೋಪಿಗಳು ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.