'One Sided Love Story' - ಆತನ ಹುಚ್ಚು ಪ್ರೀತಿಗೆ ಬಲಿಯಾಯಿತು ಅಮಾಯಕಿ ಪ್ರಾಣ...
Friday, July 2, 2021
ನೆಲ್ಲೂರು(ಆಂಧ್ರಪ್ರದೇಶ) : ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಜಿಲ್ಲೆಯ ಗುಡೂರು ಪ್ರದೇಶದಲ್ಲಿ ನಡೆದಿದೆ.
ತೇಜಸ್ವಿನಿ ಎಂಬಾಕೆ ಇಂಜಿನಿಯರಿಂಗ್ ಓದುತ್ತಿದ್ದ ಯುವತಿ.ಈಕೆಗೆ ವೆಂಕಟೇಶ್ ಎಂಬುವವನ ಪರಿಚಯವಾಗಿತ್ತು. ವೆಂಕಟೇಶ ತೇಜಸ್ವಿನಿಗೆ ಪ್ರೇಮ ನಿವೇದನೆ ಕೂಡ ಮಾಡಿದ್ದ. ಆದರೆ ಅದನ್ನು ಆಕೆ ತಿರಸ್ಕರಿಸಿದ್ದಳು. ಇದರಿಂದ ವೆಂಕಟೇಶ್ ಮಾನಸಿಕವಾಗಿ ಕುಗ್ಗಿದ ಎಂದು ಹೇಳಲಾಗುತ್ತಿದೆ. ಆದರೂ ಆತ ಸುಮ್ಮನಿರದೆ ತೇಜಸ್ವಿನಿಯ ಹಿಂದೆ ಬಿದ್ದು ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ವಿಷಯ ತಿಳಿದ ತೇಜಸ್ವಿನಿ ಪೋಷಕರು ವೆಂಕಟೇಶ್ ತಂದೆಗೆ ವಿಚಾರ ತಿಳಿಸಿದಾಗ ಅವನನ್ನು ಬೆಂಗಳೂರಿಗೆ ಕಳುಹಿಸಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆಯಿಂದ ಮತ್ತೆ ಅವನು ಊರಿಗೆ ಹಿಂತಿರುಗಿದ್ದಾನೆ.
ಮತ್ತೆ ಕಿರುಕುಳ ಕೊಡಲಾರಂಭಿಸಿದ ವೆಂಕಟೇಶ್ ಆತನ ಕಿರುಕುಳ ತಾಳಲಾರದೆ ತೇಜಸ್ವಿನಿ ಆಕೆಯ ಫೋನ್ ನಂಬರ್ ಕೂಡ ಬದಲಾಯಿಸಿದ್ದಳು. ಒಂದು ದಿನ ತೇಜಸ್ವಿನಿಯ ತಂದೆ-ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತೇಜಸ್ವಿನಿ ಆಕೆಯ ಸಹೋದರನ ಜೊತೆ ಮನೆಯಲ್ಲಿದ್ದಳು. ಈ ಸಂದರ್ಭ ಫೋನ್ ನಂಬರ್ ಕೇಳುವ ನೆಪದಲ್ಲಿ ಸ್ನೇಹಿತರ ಜೊತೆ ತೇಜಸ್ವಿನಿಯ ಮನೆಗೆ ಬಂದಿದ್ದ. ಫೋನ್ ನಂಬರ್ ಕಲೆಕ್ಟ್ ಮಾಡಿಕೊಳ್ಳಲು ಸ್ನೇಹಿತನನ್ನೇ ಕಳಿಸಿದ. ಎಚ್ಚೆತ್ತ ತೇಜಸ್ವಿನಿಯ ಸಹೋದರ ಕಾರ್ತಿಕ್ ಕೆಳಗಿಳಿಯುತ್ತಿದ್ದ. ಇದನ್ನು ಗಮನಿಸಿದ ವೆಂಕಟೇಶ್ ಕೂಡಲೇ ಮನೆಯೊಳಗೆ ಹೋಗಿ, ತೇಜಸ್ವಿನಿಯಿದ್ದ ರೂಂ ಬಾಗಿಲು ಹಾಕಿ, ಚಾಕುವಿನಿಂದ ಅವಳ ಕುತ್ತಿಗೆ ಇರಿದಿದ್ದಾನೆ.ಕಾರ್ತಿಕ್ ತಕ್ಷಣವೇ ತಂದೆ-ತಾಯಿ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಎಸ್ಐ ಆದಿಲಕ್ಷ್ಮಿ, ಮುಚ್ಚಿದ್ದ ರೂಂ ಓಪನ್ ಮಾಡಿದ್ರು. ಈ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ವೆಂಕಟೇಶ್ ಕಿಟಕಿಯಿಂದ ಆಚೆ ಸೀರೆಯಲ್ಲಿ ನೇಣುಬಿಗಿದುಕೊಂಡಿದ್ದ.ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ತೇಜಸ್ವಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ವೆಂಕಟೇಶ್ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. .