ಅಕ್ರಮ ಸಂಬಂಧ ಬಯಲಾಗುತ್ತದೆಂದು ತಾಯಿ-ಚಿಕ್ಕಪ್ಪ ರಿಂದ ಬಾಲಕನ ಹತ್ಯೆ!
Monday, July 5, 2021
ಅಹಮದಾಬಾದ್: ತಮ್ಮ ಅಕ್ರಮ ಸಂಬಂಧದ ಬಗ್ಗೆ ತಿಳಿಯಿತೆಂದು ಹೆತ್ತ ಮಗನನ್ನೇ ಹತ್ಯೆ ಮಾಡಿ, ಸುಟ್ಟು ಹಾಕಿರುವ ತಾಯಿ ಮತ್ತು ಚಿಕ್ಕಪ್ಪನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಎಂಟು ವರ್ಷದ ಬಾಲಕ ಹಾರ್ದಿಕ್ ಅಂಗಡಿಗೆ ಹೋದವ ಮರಳಿ ಬಾರದೆ ಕಾಣೆಯಾಗಿದ್ದನೆಂದು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸುತ್ತಿದ್ದಂತೆ ಪೊಲೀಸರಿಗೆ ಆಘಾತಕಾರಿಯಾದ ಸಂಗತಿಯೊಂದು ತಿಳಿದುಬಂದಿದೆ. ಗುಜರಾತ್ ನ ಅಹಮದಾಬಾದ್ ಗ್ರಾಮಾಂತರ ಜಿಲ್ಲೆಯ ವೀರಂಗಂ ಠಾಣೆಯ ವ್ಯಾಪ್ತಿಯ ನಿವಾಸಿಗಳಾದ ಜೋಸ್ನಾ ಪಟೇಲ್ ಮತ್ತು ಆಕೆಯ ಮೈದುನ ರಮೇಶ್ ಪಟೇಲ್ ನಡುವೆ ಅಕ್ರಮ ಸಂಬಂಧವಿತ್ತು.ಇದು ಜೋಸ್ನಾ ಪಾಟೇಲ್ ಮಗ ಹಾರ್ದಿಕ್ ಪಟೇಲ್ ಗೆ ತಿಳಿದಿತ್ತು. ಈ ವಿಚಾರವನ್ನು ಆತ ತಮ್ಮ ಕುಟುಂಬದವರಿಗೆ, ಗ್ರಾಮದವರಿಗೆ ಹೇಳಿಬಿಡುತ್ತಾನೆ ಎಂದು ಹೆದರಿದ
ಆರೋಪಿಗಳು 2018 ಸೆಪ್ಟೆಂಬರ್ 28ರಂದು ಬಾಲಕನನ್ನು ಜಲಂಪುರ ಗ್ರಾಮದ ಜಮೀನಿಗೆ ಕರೆದೊಯ್ದು ಕತ್ತು ಹಿಸುಕಿ ಸಾಯಿಸಿದರು. ಬಳಿಕ ದೇಹವನ್ನು ಸುಟ್ಟು ಹೂತುಹಾಕಿದ್ದರು. ನಂತರ ಅವನು ಕಾಣೆಯಾಗಿದ್ದಾನೆ ಎಂಬಂತೆ ನಟಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಯಾರೋ ಆತನನ್ನು ಅಪಹರಿಸಿದ್ದಾರೆ ಎಂದೇ ಭಾವಿಸಿ ತನಿಖೆ ನಡೆಸಲಾಗುತ್ತಿತ್ತು. ಆದರೆ ಕುಟುಂಬದವರನ್ನು ವಿಚಾರಣೆಗೊಳಪಡಿಸಿದಾಗ ಜೋಸ್ನಾ ಮತ್ತು ರಮೇಶ್ರ ಹೇಳಿಕೆಗಳು ಅನುಮಾನ ಮೂಡಿಸಿತ್ತು. ಬಳಿಕ ಅವರಿಬ್ಬರನ್ನು ಸರಿಯಾಗಿ ತನಿಖೆ ನಡೆಸಿದಾಗ ಕೊಲೆಗೈದ ವಿಚಾರ ಬೆಳಕಿಗೆ ಬಂದಿದೆ.
ಇದೀಗ ಪೊಲೀಸರು ಜೋಸ್ನಾ ಪಟೇಲ್ ಮತ್ತು ರಮೇಶ್ ಪಟೇಲ್ ಅವರನ್ನು ಬಾಲಕನ ಕೊಲೆ ಮಾಡಿ, ಸಾಕ್ಷ್ಯಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಬಂಧಿಸಿದ್ದಾರೆ.