ಸಲುಗೆ ತಂದಿಟ್ಟ ಆಪತ್ತು: ಗುಟ್ಟಾಗಿ ಮದುವೆಯಾದ ಪ್ರಿಯತಮ- ಸುಪಾರಿ ನೀಡಿ ಕೊಲೆ ಮಾಡಿದ ಪ್ರಿಯತಮೆ! ಈಕೆಯ ಮರ್ಡರ್ ಪ್ಲಾನ್..
Monday, July 12, 2021
ಕೋಲಾರ: ಪ್ರಿಯಕರ ಬೇರೆ ವಿವಾಹವಾದ ಎಂದು ಕೋಪಗೊಂಡ ಮಹಿಳೆ ಸುಪಾರಿ ನೀಡಿ ಆತನನ್ನು ಕೊಲೆ ಮಾಡಿಸಿರುವ ಘಟನೆ ನಡೆದಿದೆ.
ಕೋಲಾರ ನಗರದ ನಿವಾಸಿ ಜಬೀರ್ ಕೊಲೆಯಾದ ವ್ಯಕ್ತಿ. ಈತ ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿದ್ದ ಝಕಿಯಾ ಎಂಬ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದನಂತೆ. ಝಕಿಯಾ ಜೊತೆ ಸಲುಗೆಯಿಂದ ಇದ್ದಾಗಲೇ ಆಕೆಗೆ ತಿಳಿಯದಂತೆ ಬೇರೊಂದು ವಿವಾಹವಾಗಿದ್ದಾನೆ. ಇದರಿಂದ ಕೋಪಗೊಂಡ ಝಕಿಯಾ ಜಬೀರ್ನನ್ನು ಹೈದರಾಬಾದ್ಗೆ ಕಳುಹಿಸಿ ಅಲ್ಲಿ ನನಗೊಬ್ಬರು ಮೂರು ಲಕ್ಷ ಹಣ ಕೊಡ್ತಾರೆ. ಅದನ್ನು ತೆಗೆದುಕೊಂಡು ಬಾ. ಅದರಲ್ಲಿ ನೀನು ಸ್ವಲ್ಪ ಇಟ್ಕೊಂಡು ನನಗೆ ಸ್ವಲ್ಪ ಕೊಡು ಎಂದು ಹೇಳಿ ಕಳುಹಿಸಿದ್ದಾಳಂತೆ. ಆ ಹಿನ್ನೆಲೆ ಹೈದರಾಬಾದ್ಗೆ ಹೋದ ಜಬೀರ್ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.ಈ ನಡುವೆ ಜಬೀರ್ ಪೋಷಕರು ಗಲ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾಗಿದ್ದ ಜಬೀರ್ನ ಕಾಲ್ ಡಿಟೇಲ್ಸ್ ತೆಗೆದ ನಂತರ, ಆತನೊಂದಿಗೆ ಝಕಿಯಾ ಮಾತನಾಡಿರುವುದು ತಿಳಿದಿದೆ.
ಈ ಹಿನ್ನೆಲೆಯಲ್ಲಿ ಝಕಿಯಾಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಘಟನೆಯ ಸಂಪೂರ್ಣ ಮಾಹಿತಿ ಹೊರಬಿದ್ದಿದೆ. ಜಬೀರ್ ಕುಡಿಯುವ ಕಾಫಿಗೆ ನಿದ್ರೆ ಮಾತ್ರೆ ಹಾಕಿ, ಅವನು ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಕೊಲೆ ಮಾಡಿ ಬೀದರ್ ಬಳಿಯ ನಿಡುವಂಚಿ ಗ್ರಾಮದ ಬಳಿ ಮಣ್ಣಿನಲ್ಲಿ ಹೂತು ಹಾಕಿರುವುದನ್ನು ಆರೋಪಿ ಬಾಯ್ಬಿಟ್ಟಿದ್ದಾಳೆ. ಝಕಿಯಾ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.