ಪತ್ನಿಯ ಮೇಲೆ ಸಂಶಯ: ಆಕೆಯನ್ನು ಕೊಲ್ಲಲು ಅಸ್ಸಾಂನಿಂದ ಚಾಕು ತಂದಿದ್ದ ಪತಿ!
Saturday, July 10, 2021
ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಆಕೆಯ ಕೊಲೆಗೆ ಯತ್ನಿಸಿದ ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಭುಜ್ರತ್ ಅಲಿ (34) ಬಂಧಿತ. ಆರೋಪಿ ಗುರುವಾರ ತಡರಾತ್ರಿ ಪತ್ನಿ ಅನ್ವರಾ ಬೇಗಂ ಮುಖಕ್ಕೆ ಇರಿದು ಪರಾರಿಯಾಗಿದ್ದ. ಅಸ್ಸಾಂ ಮೂಲದ ಭಜ್ರತ್ ಅಲಿ 14 ವರ್ಷಗಳ ಹಿಂದೆ ಅನ್ವರಾ ಬೇಗಂಳನ್ನು ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಅಸ್ಸಾಂನಲ್ಲಿಯೇ ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮತ್ತೂಂದೆಡೆ ಪತ್ನಿ ಅನ್ವರಾ ಬೇಗಂಗೆ ಮತ್ತೂಬ್ಬ ವ್ಯಕ್ತಿಯ ಪರಿಚಯವಾಗಿದ್ದು, ಆತನ ಜತೆ ಹೆಚ್ಚು ಸಲುಗೆಯಿಂದ ಇದ್ದಳು ಎಂದು ಹೇಳಲಾಗಿದೆ. ಈ ವಿಚಾರ ತಿಳಿದ ಆರೋಪಿ, ಮದ್ಯದ ಅಮಲಿನಲ್ಲಿ ಆಕೆಗೆ ನಿತ್ಯ ಹಲ್ಲೆ ನಡೆಸುತ್ತಿದ್ದ. ಅದರಿಂದ ಬೇಸತ್ತಿದ್ದ ಬೇಗಂ, ಪತಿಯಿಂದ ದೂರವಾಗಲು ನಿರ್ಧರಿಸಿದ್ದಳು. ಪತಿಯ ದೌರ್ಜನ್ಯದಿಂದ ಆಕ್ರೋಶಗೊಂಡಿದ್ದ ಬೇಗಂ, ಪತಿಗೆ ಬೆಂಗಳೂರಿಗೆ ಕೆಲಸಕ್ಕೆಂದು ಹೋಗುತ್ತಿದ್ದು,ಕೆಲ ದಿನಗಳ ಬಳಿಕ ನಿನ್ನನ್ನುಕರೆಸಿಕೊಳ್ಳುತ್ತೇನೆ ಎಂದು ಮಕ್ಕಳ ಜತೆ ಬೆಂಗಳೂರಿಗೆ ಬಂದು ಮಾರತ್ತಹಳ್ಳಿಯ ಶೆಡ್‌ವೊಂದರಲ್ಲಿ ವಾಸವಾಗಿದ್ದು, ಹೌಸ್ ಕಿಂಪಿಂಗ್ ಕೆಲಸ ಮಾಡಿಕೊಂಡಿದ್ದಳು. ಆದರೆ, ಪತಿಗೆ ಈ ವಿಚಾರ ತಿಳಿಸಿರಲಿಲ್ಲ. ಹೀಗಾಗಿ ಆರೋಪಿ, ಪತ್ನಿಯ ಸಂಬಂಧಿಕರಿಗೆ ಆಕೆಯ ವಿಳಾಸ ನೀಡುವಂತೆ ಕೇಳಿದ್ದಾನೆ. ಆದರೆ, ಈತನ ದೌರ್ಜನ್ಯ ಕಂಡಿದ್ದ ಯಾರು ವಿಳಾಸ ನೀಡಿರಲಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಬಳಿಕ ಆರೋಪಿ ತನ್ನ ಊರಿನಲ್ಲಿ ಪಂಚಾಯಿತಿ ಕರೆದು ಮುಖ್ಯಸ್ಥ ರಿಗೆ ತನ್ನ ಪತ್ನಿಯ ವಿಳಾಸ, ಮೊಬೈಲ್ ನಂಬರ್ ಕೊಡಿಸಿ, ಆಕೆ ಜತೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದ. ಕೆಲ ದಿನಗಳ ಬಳಿಕ ಊರಿನ ಮುಖ್ಯಸ್ಥರು ಆಕೆಯ ಬೆಂಗಳೂರು ವಿಳಾಸ ಕೊಟ್ಟಿದ್ದರು.
ಈ ಸಂಬಂಧ ಒಂದೂವರೆ ತಿಂಗಳ ಹಿಂದೆ ಪತ್ನಿಯನ್ನು ಹುಡುಕಿಕೊಂಡು ಬಂದಿದ್ದ ಆರೋಪಿ, ಆಕೆಯ ಮನವೊಲಿಸಿ ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಆರೋಪಿ, ಪತ್ನಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆಗ ಆಕೆ ನಿರಾಕಸಿದಾಗ ಚಾಕುವಿನಿಂದ ಆಕೆಯ ಮುಖಕ್ಕೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವವಾದಿಂದ ಆಕೆ ಕೆಳಗೆ ಬಿದ್ದ ಕೂಡಲೇ ಪತ್ನಿ ಸತ್ತಿದ್ದಾಳೆ ಎಂದು ಭಾವಿಸಿ ಸ್ಥಳದಿಂದ ಅರೆ ಬೆತ್ತಲಾಗಿ ಪರಾರಿಯಾಗಿದ್ದಾನೆ. ಸಮೀಪದ ಮಾರುಕಟ್ಟೆಗೆ ಹೋಗಿ ಒಂದು ಟೀ ಶರ್ಟ್‌ಖರೀದಿಸಿ ಹಾಕಿಕೊಂಡು ನೇರವಾಗಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾನೆ. ಅದೇ ವೇಳೆ ಪೊಲೀಸರ ವಿಚಾರಣೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಕೆ.ಆರ್.ಪುರಂ ಕಡೆ ಹೋಗುತ್ತಿರುವ ಮಾಹಿತಿ ನೀಡಿದ್ದರು. ಕೂಡಲೇ ರೈಲ್ವೆ ನಿಲ್ದಾಣದಲ್ಲಿ ಶೋಧಿಸಿದಾಗ ಅಸ್ಸಾಂ ತೆರಳಲು ಟಿಕೆಟ್ ಖರೀದಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.