Mangalore- ವೈರಲ್ ಆಯಿತು ಆ್ಯಂಬುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕನ ದರ್ಪ- ಮಾನವೀಯತೆ ಮರೆತವನಿಗೆ ಮುಂದೇನಾಯಿತು ಗೊತ್ತಾ? (Video)
Tuesday, July 20, 2021
ಮಂಗಳೂರು: ರಸ್ತೆಯಲ್ಲಿ ಆ್ಯಂಬುಲೆನ್ಸ್ ಹೋಗ್ತಾ ಇದೆ ಅಂದರೆ ಎಂತಹ ಕಲ್ಲು ಮನಸಿನವರು ದಾರಿ ಬಿಟ್ಟು ಜೀವ ಉಳಿಯಲಿ ಎಂದುಕೊಳ್ಳುತ್ತಾರೆ.ಆದರೆ ಮಂಗಳೂರನಲ್ಲೊಬ್ಬ ಹೀಗೆ ಮಾಡದೆ ಕಟುಕತನ ಮೆರೆದು ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.
ನಿನ್ನೆ ದೇರಳಕಟ್ಟೆಯಿಂದ ಪಂಪ್ ವೆಲ್ ಗೆ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಗೆ ರಸ್ತೆ ಮಧ್ಯೆ ಎರ್ಟಿಗಾ ಕಾರೊಂದು ವೇಗವಾಗಿ ಸಂಚರಿಸಲು ಅಡ್ಡಿಪಡಿಸಿದೆ. ಆ್ಯಂಬುಲೆನ್ಸ್ ಸೈರನ್ ಗೂ ಕ್ಯಾರ್ ಮಾಡದೆ ದಾರಿ ಬಿಟ್ಟುಕೊಡದೆ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿಪಡಿಸಲಾಗಿತ್ತು. ಇದರ ವಿಡಿಯೋ ಇಂದು ಬೆಳಿಗ್ಗೆ ಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ಬೆನ್ನತ್ತಿದ್ದ ಪೊಲೀಸರ ಕಾರು ಚಾಲಕನ ಅಹಂಕಾರ ಇಳಿಸಿದ್ದಾರೆ.
ಉಳ್ಳಾಲದ ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್ 2ನೇ ಅಡ್ಡ ರಸ್ತೆಯ ಚರಣ್ ರಾಜ್ ಎಸ್(31) ಎಂಬಾತನನ್ನು ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ವೈರಲ್ ವಿಡಿಯೋ ಗಮನಿಸಿದ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 279 ಹಾಗೂ 194(ಇ) ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಕಾರು ನಂಬರ್ ನ ಆಧಾರದಲ್ಲಿ ಈತನನ್ನು ಬಂಧಿಸಿದ್ದಾರೆ.
ಯಾವುದೇ ತುರ್ತು ವಾಹನಗಳು ಸೈರನ್ ಮಾಡಿಕೊಂಡು ಸಂಚರಿಸುತ್ತಿರುವಾಗ ತೊಂದರೆ ಮಾಡಿದ್ದಲ್ಲಿ ಆರು ತಿಂಗಳು ಜೈಲುಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈಗಾಗಲೇ ಈ ಕಾರನ್ನು ಸೀಜ್ ಮಾಡಿದ್ದೇವೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಾಹನದ ಮಾಲಕ ಆರೋಪಿಯ ಸಂಬಂಧಿಕರಾಗಿದ್ದು, ಅವರಿಗೂ ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.