
ಸ್ಯಾಮ್ ಸಂಗ್ M 32 ಹೊಚ್ಚಹೊಸ ಫೋನ್ ಮಾರುಕಟ್ಟೆಗೆ: ಏನಿದರ ವಿಶೇಷತೆ?
Saturday, July 3, 2021
ಬೆಂಗಳೂರು: ಸ್ಯಾಮ್‍ಸಂಗ್ M 32 ಎಂಬ ಹೊಚ್ಚಹೊಸತ್ತು ಫೋನೊಂದನ್ನು ವಾರದ ಹಿಂದೆಯಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 4 ಜಿಬಿ Ram, 64 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 14,999 ರೂ. ಬೆಲೆಯಿದೆ. 6ಜಿಬಿ Ram ಮತ್ತು 128 ಜಿಬಿ ಆವೃತ್ತಿಗೆ 16,999 ರೂ. ಬೆಲೆಗೆ Amazon. in ನಲ್ಲಿ ದೊರಕುತ್ತದೆ. SBI, ICICI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಕೊಂಡರೆ 1250 ರೂ. ರಿಯಾಯಿತಿ ಕೂಡಾ ಪಡೆಯಬಹುದು.
ಇತ್ತೀಚೆಗೆ ಮಧ್ಯಮ ದರ್ಜೆಯ ಫೋನ್‍ಗಳನ್ನೂ ಅತ್ಯಾಕರ್ಷಕ ವಿನ್ಯಾಸದಲ್ಲಿ ಗ್ರಾಹಕರಿಗೆ ನೀಡಲು ಸ್ಯಾಮ್‍ಸಂಗ್ ಯತ್ನಿಸುತ್ತಿದೆ. M 31 ಫೋನ್ ಮಾಮೂಲಿಯಾಗಿತ್ತು. ಹೊರ ವಿನ್ಯಾಸದಲ್ಲಿ ಯಾವುದೇ ಆಕರ್ಷಕ ವಿನ್ಯಾಸವಿರಲಿಲ್ಲ. ಇತರ ಬ್ರಾಂಡ್‍ಗಳ ಪೈಪೋಟಿಯನ್ನು ಎದುರಿಸಬೇಕಾಗಿರುವ ಕಾರಣ ಸ್ಯಾಮ್ ಸಂಗ್ ಮುತುವರ್ಜಿ ವಹಿಸುತ್ತಿದೆ. ಈ ಫೋನಿನ ಹಿಂಭಾಗದ ಕವರ್ ಪ್ಲಾಸ್ಟಿಕ್ ನದ್ದಾದರೂ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಕಪ್ಪು ಬಣ್ಣದ ಮೇಲೆ ಸಣ್ಣ ಉದ್ದದ ಗೆರೆಗಳುಳ್ಳ ವಿನ್ಯಾಸ ಚೆನ್ನಾಗಿ ಕಾಣುತ್ತದೆ. ಹಿಂಬದಿಯ ಎಡ ಮೂಲೆಯಲ್ಲಿ ನಾಲ್ಕು ಲೆನ್ಸ್ ಗಳ ಕ್ಯಾಮರಾ ಇರಿಸಲಾಗಿದೆ. ಕ್ಯಾಮರಾ ಕೆಳಗೆ ಫ್ಲಾಶ್ ಲೈಟ್ ಇದೆ. ಮಧ್ಯಮ ವಲಯದಲ್ಲಿ ಉತ್ತಮ ಪರದೆ: 6.4 ಇಂಚಿನ ಫುಲ್ ಎಚ್‍ಡಿ ಪ್ಲಸ್ ಸೂಪರ್ ಅಮೋಲೆಡ್ ಪರದೆ ಹೊಂದಿದೆ. ಇದಕ್ಕೆ 90 ಹರ್ಟ್ಜ್ ರಿಫ್ರೆಶ್ ರೇಟ್ ಇದೆ. ಅಮೋಲೆಡ್ ಪರದೆಗೆ 800 ನಿಟ್ಸ್ ಹೈ ಬ್ರೈಟ್‍ನೆಸ್ ಮೋಡ್ ಇರುವುದರಿಂದಾಗಿ, ಪರದೆ ಹೆಚ್ಚು ಹೊಳೆಯುತ್ತದೆ. ಅಮೋಲೆಡ್ ಸ್ಕ್ರೀನ್ + 90 ಹರ್ಟ್ಜ್ ರಿಫ್ರೆಶ್‍ರೇಟ್ + 800 ನಿಟ್ಸ್ ನಿಂದಾಗಿ ಈ ದರ ಪಟ್ಟಿಯಲ್ಲಿ ಉತ್ತಮ ಸ್ಕ್ರೀನನ್ನು ಈ ಮೊಬೈಲ್ ಹೊಂದಿದೆ. ಜೊತೆಗೆ ಇದಕ್ಕೆ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಕೂಡ ಇದೆ.
M 32 ಗೆ ಮೀಡಿಯಾ ಟೆಕ್ ಕಂಪೆನಿಯ ಹೀಲಿಯೋ ಜಿ80 ಪ್ರೊಸೆಸರ್ ಬಳಸಿದೆ. ಈ ಪ್ರೊಸೆಸರ್ ಅನ್ನು 9 ಸಾವಿರ ರೂ. ದರದ ಮೊಬೈಲ್‍ಗಳಲ್ಲಿ ಬಳಸಲಾಗಿದೆ. (ಉದಾ: ರಿಯಲ್‍ಮಿ ನಾರ್ಜೋ 30ಎ) ಕೆಲವು ಬ್ರಾಂಡ್‍ಗಳು 15 ಸಾವಿರ ದರದಲ್ಲಿ ಜಿ 80ಗಿಂತಲೂ ಉನ್ನತವಾದ ಹೀಲಿಯೋ ಜಿ95 ಪ್ರೊಸೆಸರ್ ಬಳಸಿವೆ (ಉದಾ: ರೆಡ್‍ಮಿ ನೋಟ್ 10ಎಸ್). ಸ್ಯಾಮ್ ಸಂಗ್ ಈ ಮೊಬೈಲ್‍ನಲ್ಲಿ ಉತ್ತಮ ಪರದೆ ಮತ್ತು ಕ್ಯಾಮರಾಗೆ ಆದ್ಯತೆ ನೀಡಿರುವುದರಿಂದ ಪ್ರೊಸೆಸರ್ ಬಳಕೆಯಲ್ಲಿ ಕೊಂಚ ಕಾಂಪ್ರೊಮೈಸ್ ಮಾಡಿಕೊಂಡಿದೆ ಎಂದರೆ ತಪ್ಪಿಲ್ಲ. ಹೊಸ ಥೀಮ್ ಗಳಿವೆ, ಲಾಕ್ ಸ್ಕ್ರೀನ್ ಮೇಲೆ ಆಕರ್ಷಕವಾದ ಹಕ್ಕಿ, ಪ್ರಕೃತಿಯ ಫೋಟೋಗಳು ಪ್ರತಿ ಬಾರಿ ಬದಲಾಗುವಂತಿದ್ದು, ಕಣ್ಮನ ಸೆಳೆಯುತ್ತವೆ. ಈ ದರ ಪಟ್ಟಿಯಲ್ಲಿ 64 ಮೆಗಾಪಿಕ್ಸಲ್ ಕ್ಯಾಮರಾ ನೀಡಿರುವುದು ಒಂದು ಪ್ಲಸ್ ಪಾಯಿಂಟ್. 8 ಮೆಗಾ ಪಿಕ್ಸೆಲ್ ವೈಡ್ ಲೆನ್ಸ್, 2 ಮೆ.ಪಿ. ಡೆಪ್ತ್ ಮತ್ತು 2 ಮ್ಯಾಕ್ರೋ ಲೆನ್ಸ್ ಅನ್ನು ಹಿಂಬದಿ ಕ್ಯಾಮರಾ ಒಳಗೊಂಡಿದೆ. 20 ಮೆ.ಪಿ. ಸೆಲ್ಫೀ ಕ್ಯಾಮರಾ ಇದೆ. ಹಿಂಬದಿ ಕ್ಯಾಮರಾದಲ್ಲಿ 10ಎಕ್ಸ್ ಜೂಮ್ ಇದೆ. 0.5 ಎಕ್ಸ್ ನಿಂದ 1, 2, 4 ಹಾಗೂ 10 ಎಕ್ಸ್ ಜೂಮ್‍ವರೆಗೆ ವಿಸ್ತರಿಸಿಕೊಳ್ಳಬಹುದು. 123 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಕೂಡ ಚೆನ್ನಾಗಿದೆ. ಚಿಕ್ಕ ಕೋಣೆಯೊಳಗೆ ನಿಂತು ತುಂಬಾ ಹಿಂದೆ ಹೋಗದೇ ಫೋಟೋಗಳನ್ನು ಕ್ಲಿಕ್ಕಿಸಬಹುದು. ಆಟೋ ಮೋಡ್‍ನಲ್ಲೇ ಫೋಟೋಗಳು ಚೆನ್ನಾಗಿ ಮೂಡಿಬರುತ್ತವೆ. ಕ್ಯಾಮರಾ ಪರಿಣಿತರು ಪ್ರೊ ಮೋಡ್‍ನಲ್ಲಿ ಇನ್ನೂ ಚೆನ್ನಾಗಿ ಫೋಟೋ ಕ್ಲಿಕ್ಕಿಸಬಹುದು. ಪೋರ್ಟ್ರೈಟ್ ಮೋಡ್‍ನಲ್ಲಿ ಉತ್ತಮ ಫೋಟೋಗಳು ಬರುತ್ತವೆ. ಫೋಟೋ ಅಲ್ಲದೇ, ವಿಡಿಯೋ ಗುಣಮಟ್ಟ ತೃಪ್ತಿದಾಯಕವಾಗಿದೆ.
ಬ್ಯಾಟರಿ ವಿಷಯದಲ್ಲಿ ಈ ಮೊಬೈಲ್ ದೈತ್ಯ. 6000 ಎಂಎಎಚ್ ಬ್ಯಾಟರಿ ಹೊಂದಿದೆ. ಖಂಡಿತಾ ಒಂದೂವರೆ ದಿನ ಮೊಬೈಲ್ ಬಳಕೆ ಮಾಡಬಹುದು. ಆದರೆ ಇಷ್ಟು ದೈತ್ಯ ಬ್ಯಾಟರಿಗೆ ನೀಡಿರುವ ಚಾರ್ಜರ್ 15 ವ್ಯಾಟ್ಸ್ ಮಾತ್ರ. ಈ ಚಾರ್ಜರ್ ಬಳಸಿದರೆ ಬ್ಯಾಟರಿ ಫುಲ್ ಆಗಲು ಸುಮಾರು 3 ಗಂಟೆ ತಗುಲುತ್ತದೆ. ನಿಮ್ಮಲ್ಲಿ 25 ವ್ಯಾಟ್ಸ್ ವೇಗದ ಚಾರ್ಜರ್ ಬಳಸಿದರೆ 1 ಗಂಟೆ 50 ನಿಮಿಷದಲ್ಲಿ ಶೂನ್ಯದಿಂದ ಫುಲ್ ಚಾರ್ಜ್ ಆಗುತ್ತದೆ.