ಕಡ್ಲೆಕಾಯಿ ಮಾರುತ್ತಿದ್ದ ಕೊಪ್ಪಳದ ಹೈದ ಈಗ ಬ್ರಿಟನ್ ಸೈನಿಕ: ಗೋಪಾಲ ವಾಕೋಡೆ ಇಂಟ್ರೆಸ್ಟಿಂಗ್ ಕಹಾನಿ
Tuesday, July 6, 2021
ಕೊಪ್ಪಳ: ಹೊಟ್ಟೆಪಾಡಿಗಾಗಿ ಕಡ್ಲೆಕಾಯಿ ಮಾರುತ್ತಿದ್ದ ಕೊಪ್ಪಳದ ಹೈದನೋರ್ವ ಈಗ ಇರೋ ದೇಶ, ಏರಿದ ಸ್ಥಾನ ಕೇಳಿದ್ರೆ ಒಂದೊಮ್ಮೆ ಅಚ್ಚರಿಯ ಜೊತೆಗೆ ಹೆಮ್ಮೆ ಕೂಡ ಆಗುತ್ತೆ.
ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಗೋಪಾಲ ವಾಕೋಡೆ ಬ್ರಿಟನ್ ನಲ್ಲಿ ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸುತ್ತಿರುವ ಯುವಕ. ಶಹಪುರ ಗ್ರಾಮದ ಯಲ್ಲಪ್ಪ ವಾಕೋಡೆ ಹಾಗೂ ಫಕೀರವ್ವ ದಂಪತಿಯ ಐದು ಮಕ್ಕಳಲ್ಲಿ ಗೋಪಾಲ ಕೊನೆಯವರು. ಇವರಿಗೆ ಮೂವರು ಸಹೋದರಿಯರು ಹಾಗೂ ಓರ್ವ ಸಹೋದರನಿದ್ದಾನೆ. ಗೋಪಾಲ ವಾಕೋಡೆ 10 ವರ್ಷದ ಬಾಲಕನಿದ್ದಾಗ ತಂದೆ, ಕುಟುಂಬ ಸಮೇತ ಗೋವಾಗೆ ತೆರಳಿದ್ದರು.
ಆದರೆ ಮದ್ಯ ವ್ಯಸನಿಯಾಗಿದ್ದ ಯಲ್ಲಪ್ಪ ಬೇಗನೆ ಮೃತಪಡುತ್ತಾರೆ. ಕೆಲ ದಿನಗಳ ಬಳಿಕ ತಾಯಿಯೂ ಮೃತಪಡುತ್ತಾಳೆ.
ಹೆತ್ತವರನ್ನು ಕಳೆದುಕೊಂಡ ಬಾಲಕ ಗೋಪಾಲ, ಗೋವಾ ಬೀಚ್‍ನಲ್ಲಿ ಕಡ್ಲೆಕಾಯಿ ಮಾರಾಟ ಮಾಡಲು ಮುಂದಾಗುತ್ತಾರೆ. ಈ ವೇಳೆ ಗೋವಾ ಪ್ರವಾಸಕ್ಕೆ ಬರುತ್ತಿದ್ದ ಇಂಗ್ಲೆಂಡ್‍ನ ಬ್ರಿಟ್ಸ್ ಕೊರೊಲ್ ಮತ್ತು ಕೊಲಿನ್ ಹ್ಯಾನ್ಸನ್ ಎಂಬ ದಂಪತಿ ಬಾಲಕ ಗೋಪಾಲ ವಾಕೋಡೆ ಸಂಕಷ್ಟಕ್ಕೆ ಮರುಗಿ ಗೋವಾಕ್ಕೆ ಬಂದಾಗೆಲ್ಲ ಹಣಕಾಸಿನ ನೆರವು ನೀಡುತ್ತಿದ್ದರು. ಹೀಗೆ ವರ್ಷಂಪ್ರತಿ ಬರುತ್ತಿದ್ದ ಬ್ರಿಟ್ಸ್ ದಂಪತಿ, ಗೋಪಾಲ ವಾಕೋಡೆಗೆ 19 ವರ್ಷ ತುಂಬಿದ ಬಳಿಕ ಇಂಗ್ಲೆಂಡ್‍ಗೆ ಕರೆದುಕೊಂಡು ಹೋಗಿ ಅಲ್ಲಿನ ಮಿಲಿಟರಿ ಬ್ಯಾರಕ್‍ನಲ್ಲಿ ಕ್ರಿಕೆಟ್ ತರಬೇತಿ ಕೊಡಿಸುತ್ತಾರೆ. ಅಲ್ಲಿ ಉತ್ತಮ ಪ್ರದರ್ಶನ ತೋರಿದ ಗೋಪಾಲ ತಾಕೋಡೆಯವರ ಚಾಣಾಕ್ಷತೆ ಮೆಚ್ಚಿದ ಮಿಲಿಟರಿ ಅಧಿಕಾರಿಯೊಬ್ಬರು ಸೈನ್ಯಕ್ಕೆ ಸೇರಿಸಲು ಬೇಕಾದ ಎಲ್ಲಾ ತರಬೇತಿ ಹಾಗೂ ಸಹಕಾರ ನೀಡುತ್ತಾರೆ. ಈ ಮೂಲಕ ಕುಗ್ರಾಮದಲ್ಲಿ ಬೆಳೆದ ಗೋಪಾಲ್ ಬ್ರಿಟಿಷ್ ಸೇನೆಯಲ್ಲಿ ಕೆಲಸ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ.
ಕೆಲಸ ಪಡೆದು ಅಲ್ಲಿಯೇ ನೆಲೆ ನಿಂತ ಯುವಕ ಗೋಪಾಲ್, ಜಾಸ್ಮಿನ್ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ. ಸದ್ಯ ಡೈಸಿ ಎಂಬ ಹೆಣ್ಣು ಮಗು ಕೂಡ ಇದೆ. ಬ್ರಿಟಿಷ್ ಪ್ರಜೆಯಾಗಿದ್ದರೂ ಸಹ ಗೋಪಾಲ ವಾಕೋಡೆ ಅವರಿಗೆ ಈಗಲೂ ಊರು, ದೇಶದ ಮೇಲಿನ ಅಭಿಮಾನ ಹಾಗೇ ಇದೆ. ಗೋಪಾಲನ ಸಂಬಂಧಿಕರು ಈಗಲೂ ಶಹಪುರದಲ್ಲಿದ್ದು, ಮೂರು ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ಹೋಗುತ್ತಾರೆ ಎನ್ನುತ್ತಾರೆ ಸ್ಥಳೀಯರು.